LATEST NEWS
ಯೇಸುವನ್ನು ಭೇಟಿಯಾಗಲು ಉಪವಾಸ ಮಾಡಿ ಎಂದ ಪಾದ್ರಿ….ಜೀವಂತ ಸಮಾಧಿಯಾದ 100ಕ್ಕೂ ಅಧಿಕ ಮಂದಿ..ಕೀನ್ಯಾದಲ್ಲೊಂದು ಭೀಕರ ದುರಂತ
ಮಾಲಿಂಡಿ (ಕೀನ್ಯಾ) ಎಪ್ರಿಲ್ 25: ಇಡೀ ಪ್ರಪಂಚವೇ ಬೆಚ್ಚಿ ಬಿಳಿಸುವಂತ ಘಟನೆ ಕೀನ್ಯಾದಲ್ಲಿ ನಡೆದಿದ್ದು, ಪಾದ್ರಿಯೊಬ್ಬನ ಮಾತು ಕೇಳಿ ಕಠಿಣ ಉಪವಾಸ ಮಾಡಿದ 100ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾದ ಘಟನೆ ನಡೆದಿದೆ. ದಕ್ಷಿಣ ಕೀನ್ಯಾದ ಕರಾವಳಿ ನಗರವಾದ ಮಾಲಿಂಡಿ ಬಳಿಯ ಶಕಹೋಲಾ ಎಂಬ ಹಳ್ಳಿಯ ಅರಣ್ಯದಂಚಿನ ಜಮೀನಿನಲ್ಲಿ ಕೀನ್ಯಾ ಪೊಲೀಸರು ಇದುವರೆಗೆ 83 ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಾಲಿಂಡಿ ಪ್ರದೇಶದಲ್ಲಿ ವಶೀಕರಣ ವಿದ್ಯೆಯಲ್ಲಿ ಕುಖ್ಯಾತ ಆಗಿದ್ದ ಪೌಲ್ ಮೆಕೆನ್ಜೀ ಎನ್ನುವ ಪಾದ್ರಿ ಯೇಸುವನ್ನು ಭೇಟಿಯಾಗಬೇಕಾದರೆ ಭೇಟಿಯಾಗಬೇಕಾದರೆ ಸಮಾದಿ ಸ್ಥಿತಿಯಲ್ಲಿ ಕಠಿಣ ಉಪವಾಸ ಮಾಡಿ’ ಎಂದು ಅಮಾಯಕ ಜನರಿಗೆ ಹೇಳಿದ್ದಾನೆ. ಇದನ್ನು ನಂಬಿದ ಅಮಾಯಕರು ಸಮಾಧಿ ಸ್ಥಿತಿಯಲ್ಲಿ ಕಠಿಣ ಉಪವಾಸ ಕೈಗೊಂಡಿದ್ದಾರೆ. ಆಹಾರ ಇಲ್ಲದೆ ಸಮಾಧಿಯಲ್ಲೆ ಸಾವನಪ್ಪಿದ್ದಾರೆ. ಈವರೆಗೆ 83ಕ್ಕೂ ಅಧಿಕ ದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಕೀನ್ಯಾದ ರೆಡ್‌ಕ್ರಾಸ್ ಸಂಸ್ಥೆಯ ಪ್ರಕಾರ ಮಾಲಿಂಡಿಯಲ್ಲಿ 212 ಜನ ಕಾಣೆಯಾಗಿದ್ದಾರೆ. ಅವರಲ್ಲಿ ಬಹುತೇಕರು ಹೀಗೆ ಉಪವಾಸ ಮಾಡಿಯೇ ಸತ್ತಿರಬಹುದು ಎಂದು ಶಂಕಿಸಿದ್ದಾರೆ. ಮೃತರ ಗುರುತು ಹಿಡಿಯುವುದು ಕಠಿಣ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಮೆಕೆನ್ಜೀಯನ್ನು ಬಂಧಿಸಿದ್ದಾರೆ. ಈತ ಮಾಲಿಂಡಿಯ ಚರ್ಚ್‌ನ ಪಾದ್ರಿಯಾಗಿದ್ದು, ಮಾಟ–ಮಂತ್ರ ವಶೀಕರಣ ಆರೋಪದಲ್ಲಿ ಎರಡು ಬಾರಿ ಜೈಲಿಗೆ ಹೋಗಿ ಹೊರಬಂದಿದ್ದ. ಮೆಕೆನ್ಜಿಯನ್ನು ಜೈಲಿನಿಂದ ಹೊರಗೆ ಬಿಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಶಕಹೋಲಾ ಹಳ್ಳಿಯಲ್ಲಿ ಬೀಡು ಬಿಟ್ಟಿರುವ ಪೊಲೀಸರು ಇನ್ನುಳಿದ ಮೃತದೇಹಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರಲ್ಲಿ ಮಕ್ಕಳು ಹಾಗೂ ಮಹಿಳೆಯರೂ ಸೇರಿದ್ದಾರೆ. ಏತನ್ಮಧ್ಯೆ ಈ ಘಟನೆಯನ್ನು ಭಯೋತ್ಪಾದನೆಗೆ ಸಮನಾದ ಕೃತ್ಯ ಎಂದು ಹೇಳಿರುವ ಕೀನ್ಯಾ ಅಧ್ಯಕ್ಷ ವಿಲಿಯಮ್ ರುಟೊ, ಇದು ಸ್ವೀಕರಿಸಲಾರದ ಧಾರ್ಮಿಕ ಹೇಯ ಕೆಲಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.