LATEST NEWS
ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ತಾಂತ್ರಿಕ ಸಮಸ್ಯೆ – ವಿಶ್ವದಾದ್ಯಂತ ಹಲವು ಸೇವೆಗಳಲ್ಲಿ ವ್ಯತ್ಯಯ

ಬೆಂಗಳೂರು ಜುಲೈ 19: ಸಾಪ್ಟವೇರ್ ದೈತ್ಯ ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಇದರಿಂದಾಗಿ ವಿಂಡೋಸ್ ಆಪರೆಟಿಂಗ್ ಸಿಸ್ಟಮ್ಸ್ ಬಳಸುವ ಸಂಸ್ಥೆಗಳಲ್ಲಿ ಸಮಸ್ಯೆಗಳುಂಟಾಗಿದ್ದು, ವಿಮಾನಯಾನ, ಸ್ಟಾಕ್ ಎಕ್ಸ್ ಚೆಂಜ್ ಸೇರಿದಂತೆ ಅನೇಕ ವಲಯಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮೈಕ್ರೋ ಸಾಪ್ಟ್ ಅಪರೇಟಿಂಗ್ ಸಿಸ್ಟಮ್ಸ್ ನ ಅಪ್ಡೇಟಿಂಗ್ ಒಂದರಲ್ಲಿ ಉಂಟಾದ ಸಮಸ್ಯೆಯಿಂದಾಗಿ ವಿಂಡೋಸ್ ಕಾರ್ಯಾಚರಣೆ ಸಿಸ್ಟಮ್ಸ್ ಗಳು ಬ್ಲೂ ಸ್ಕ್ರೀನ್ ಆಫ್ ಡೆತ್ ಬಂದು ಕ್ರ್ಯಾಶ್ ಆಗಿವೆ. ಈ ತಾಂತ್ರಿಕ ಸಮಸ್ಯೆ ವಿಶ್ವದಾದ್ಯಂತ ಹಲವು ಸೇವೆಗಳನ್ನು ಬಂದ್ ಮಾಡಿಸಿದೆ. ಭಾರತದಲ್ಲೂ ತಾಂತ್ರಿಕ ಸಮಸ್ಯೆಯಿಂದ ಭಾರತದ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್ ನವೀಕರಣಗಳ ಸೇವೆ ಮೇಲೆ ಪರಿಣಾಮ ಬೀರಿದೆ. ದೆಹಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಸಮಸ್ಯೆ ತಲೆದೋರಿದೆ. ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಕೈಬರಹದಲ್ಲೇ ಬೋರ್ಡಿಂಗ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಸೇವೆಯಲ್ಲೂ ವ್ಯತ್ಯಯವಾಗಿದೆ. ಸ್ಕೈ ನ್ಯೂಸ್, ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ಪ್ರಸಾರ ಸ್ಥಗಿತಗೊಂಡಿದೆ. ಬ್ರಿಟನ್‌ನಲ್ಲೂ ರೈಲು ಸೇವೆ ಸ್ಥಗಿತವಾಗಿದೆ. ಭಾರತದ ಐಟಿ ಇಲಾಖೆಯಿಂದ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಸಂಪರ್ಕ ಸಾಧಿಸಲಾಗುತ್ತಿದೆ.