DAKSHINA KANNADA
ಮಂಗಳೂರಿನ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಅಭಾವ!

ಮಂಗಳೂರು, ಮೇ 13: ತುರ್ತು ಸಂದರ್ಭಗಳು ಮತ್ತು ಶಸ್ತ್ರಚಿಕಿತ್ಸೆಗೆ ಅತೀ ಮುಖ್ಯವಾಗಿ ಬೇಕಾಗಿರುವುದು ರಕ್ತ. ರಕ್ತ ಸಂಗ್ರಹ ಇದ್ದರೆ ರೋಗಿಯ ಶಸ್ತ್ರಚಿಕಿತ್ಸೆ ಮತ್ತು ಅಗತ್ಯಕ್ಕೆ ತಕ್ಕಂತೆ ರಕ್ತ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಮಂಗಳೂರಿನಲ್ಲಿ ರಕ್ತದ ಅಭಾವ ತೀವ್ರವಾಗಿದೆ.
ಮಂಗಳೂರಿನಲ್ಲಿ 13 ಬ್ಲಡ್ ಬ್ಯಾಂಕ್ ಇದೆ. ಈ ಬ್ಲಡ್ ಬ್ಯಾಂಕ್ಗಳು ಕಳೆದ ಕೆಲ ದಿನಗಳಿಂದ ರಕ್ತದ ಕೊರತೆ ಎದುರಿಸುತ್ತಿವೆ. ಬ್ಲಡ್ ಬ್ಯಾಂಕ್‌ಗಳಲ್ಲಿ ಭಾರೀ ರಕ್ತದ ಅಭಾವ ಉಂಟಾದ ಪರಿಣಾಮ ವಿವಿಧ ಆಸ್ಪತ್ರೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಕ್ತ ದೊರೆಯುತ್ತಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಷಣಕ್ಕೆ ಬೇಕಾದಷ್ಟು ರಕ್ತ ದೊರೆಯುತ್ತಿಲ್ಲ. ಆದ್ದರಿಂದ, ತುರ್ತು ಸಂದರ್ಭದಲ್ಲಿ ಕೊರತೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಮಂಗಳೂರಿನಲ್ಲಿ ಅತ್ಯಾಧುನಿಕ ಆಸ್ಪತ್ರೆಗಳಿದ್ದು, ಚಿಕಿತ್ಸೆ ಪಡೆಯಲು ರಾಜ್ಯ, ಹೊರ ರಾಜ್ಯದ ವಿವಿಧೆಡೆಗಳಿಂದ ರೋಗಿಗಳು ಬರುತ್ತಾರೆ. ಇವರ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಕಾರಣಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ, ಇದೀಗ ಈ ರೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ರಕ್ತ ಸಿಗದಿರುವುದು ಆತಂಕ ತಂದಿದೆ.
ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿರುವ ರಕ್ತ ನಿಧಿಯಲ್ಲಿ ಪ್ರತಿದಿನಕ್ಕೆ ಸರಾಸರಿ 80 ಯುನಿಟ್ ರಕ್ತ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಷ್ಟು ರಕ್ತ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮೇ 13ಕ್ಕೆ ವೆನ್ಲಾಕ್ ರಕ್ತ ನಿಧಿಯಲ್ಲಿ ಕೇವಲ 80 ಯುನಿಟ್ ರಕ್ತ ಸಂಗ್ರಹ ಇದೆ. ಇದು ರಕ್ತದ ತೀವ್ರ ಅಗತ್ಯವುಳ್ಳವರಿಗೆ ಸಮಸ್ಯೆಯನ್ನುಂಟು ಮಾಡಿದೆ.
500 ಯುನಿಟ್ ರಕ್ತದ ಶೇಖರಣೆ ಇರಬೇಕಾದ ರಕ್ತಪೂರಣ ಕೇಂದ್ರದಲ್ಲಿ ಕೇವಲ 90 ಯುನಿಟ್ ರಕ್ತವಿದೆ. ಸದ್ಯ A+, A-, B+, B-, AB+, AB-, O ಮಾದರಿಯ ರಕ್ತದ ಕೊರತೆ ಎದುರಾಗಿದೆ.
“ಜಿಲ್ಲೆಯ ಎಲ್ಲಾ ರಕ್ತನಿಧಿಯಲ್ಲಿಯೂ ರಕ್ತದ ಕೊರತೆ ಇದೆ. ನಮ್ಮ ರಕ್ತನಿಧಿಯಲ್ಲಿಯೂ ಸಹ ಯಾವಾಗಲೂ 300 ರಿಂದ 400 ಯುನಿಟ್ನಷ್ಟು ರಕ್ತ ಶೇಖರಣೆ ಇರುತ್ತಿತ್ತು. ಈಗ ಕಡಿಮೆಯಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ಕರೆ ನೀಡಿದ್ದೆವು. ಎಲ್ಲರೂ ರಕ್ತದಾನ ಮಾಡಿ ರಕ್ತದ ಅಭಾವದ ಸಮಸ್ಯೆ ಪರಿಹರಿಸಬೇಕಾಗಿದೆ. ರಕ್ತದಾನದ ಕ್ಯಾಂಪ್‌ಗಳನ್ನು ಆಯೋಜಿಸುವಂತೆ ಸಂಘ- ಸಂಸ್ಥೆಗಳಿಗೆ ತಿಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ” ಎಂದು ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಶರತ್ ಕುಮಾರ್ ಹೇಳಿದ್ದಾರೆ.