BELTHANGADI
ಬೆಳ್ತಂಗಡಿ ಬಿಜೆಪಿ ಯುವ ಮುಖಂಡ ಕಾಂಗ್ರೇಸ್ ಸೇರ್ಪಡೆ
ಬೆಳ್ತಂಗಡಿ ಬಿಜೆಪಿ ಯುವ ಮುಖಂಡ ಕಾಂಗ್ರೇಸ್ ಸೇರ್ಪಡೆ
ಬೆಳ್ತಂಗಡಿ ಮಾರ್ಚ್ 30: ಬಿಜೆಪಿ ಯುವ ಮುಖಂಡ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಂಜನ್ ಜಿ. ಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಸಚಿವ ಯು.ಟಿ ಖಾದರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವ ಕೆ.ಗಂಗಾಧರ ಗೌಡರ ಪುತ್ರರಾಗಿರುವ ರಂಜನ್ ಗೌಡ 2013ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಅವಕಾಶ ನೀಡಿರಲಿಲ್ಲ.
ಈ ಹಿನ್ನಲೆಯಲ್ಲಿ ಅಸಮಾಧಾನ ಗೊಂಡಿದ್ದ ರಂಜನ್ ಗೌಡ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ಮಂಡಲ ಅಧ್ಯಕ್ಷ ಸ್ಥಾನದಿಂದ ಕೋಕ್ ನೀಡಿತ್ತು.
ರಂಜನ್ ಗೌಡ ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ಪ್ರಬಲವಾಗಿರುವ ಗಂಗಾಧರ ಗೌಡ ಮತ್ತು ಪುತ್ರ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗಂಗಾಧರ ಗೌಡ ಅವರು ಗುಂಡೂರಾವ್ ಸರಕಾರದಲ್ಲಿ ಸಚಿವರಾಗಿದ್ದರು. ಆ ಬಳಿಕ ಅವರು ಬಿಜೆಪಿ ಸೇರಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅವರು ಮತ್ತೆ ಕಾಂಗ್ರೆಸ್ ಪಾಳಯ ಸೇರಿದ್ದರು. ಇದೀಗ ಅವರ ಪುತ್ರ ಕೂಡಾ ಅದೇ ಹಾದಿ ಹಿಡಿದಿದ್ದಾರೆ.