LATEST NEWS
ಟಿಎಂಸಿ ಗೂಂಡಾಗಳು ನಮ್ಮ ರ‍್ಯಾಲಿ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದಾರೆ : ತೇಜಸ್ವಿ ಸೂರ್ಯ
ಕೊಲ್ಕೊತ್ತಾ, ಅಕ್ಟೋಬರ್ 8 : ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡಿದ್ದ ನಬನ್ನಾ ಚಲೋ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ದೀದಿ ನಾಡಲ್ಲಿ ರಾಜಕೀಯ ಹೋರಾಟ ಆರಂಭಿಸಿದ್ದರು.
ಇಂದು ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಟಿಎಂಸಿ ಗೂಂಡಾಗಳು ನಮ್ಮ ರ‍್ಯಾಲಿಯ ಮೇಲೆ ಕಂಟ್ರಿ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈಕುರಿತು ಟ್ವೀಟ್ ಮಾಡಿರುವ ಅವರು, ‘ಫ್ಯಾಸಿಸಂ ಅಂದ್ರೆ ಇದೇ. ನಮ್ಮ ರ‍್ಯಾಲಿ ವೇಳೆ ಟಿಎಂಸಿ ಗೂಂಡಾಗಳು ಛಾವಣಿಯಿಂದ ಕಂಟ್ರಿ ಬಾಂಬ್‌ಗಳನ್ನು ಎಸೆದಿದ್ದಾರೆ. ಶಾಂತಿಯುತ ಪ್ರತಿಭಟನೆಯ ವಿರುದ್ಧ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಿರಂಕುಶಾಧಿಕಾರಿಯ ಆಡಳಿತದ ಅಂತ್ಯ ಸಮೀಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಇಂದು ಪ್ರಜಾಪ್ರಭುತ್ವದ ಕಪ್ಪುದಿನವಾಗಿದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಕಾನೂನುಗಳನ್ನು ಮಮತಾ ಬ್ಯಾನರ್ಜಿ ಸರ್ಕಾರವು ಇಂದು ಹಾಡಹಗಲೇ ಕೊಲೆ ಮಾಡಿದೆ. ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿದೆ. ಈ ಸಿಂಡಿಕೇಟ್ ಮತ್ತು ಕಟ್‌ಮನಿ ಸರ್ಕಾರದಿಂದ ನಿರುದ್ಯೋಗವೂ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
This is what fascism looks like!
Country bombs hurled at our rally by TMC goons from rooftops.
Tear gas and water canons launched against a peaceful march.
The tyrant’s time is coming to an end.#NabannoCholo pic.twitter.com/HngQL7q4K8
— Tejasvi Surya (@Tejasvi_Surya) October 8, 2020
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯ ಖಂಡಿಸಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಬಿಜೆಪಿ ಯುವಮೋರ್ಚಾ ನೂತನ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಆಗಮಿಸಿದ್ದರು. ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಹೊರರಾಜ್ಯದಲ್ಲಿ ಅದರಲ್ಲೂ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ದೀದಿ ವಿರುದ್ಧ ಅಬ್ಬರಿಸೋಕೆ ಹೊರಟಿದ್ದರು.
ಆದರೆ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಹೌರಾದಲ್ಲಿ ಮೆರವಣಿಗೆಯನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ ನಡೆದಿದೆ. ಘಟನೆಯಲ್ಲಿ ಬಿಜೆಪಿಯ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.