DAKSHINA KANNADA
ಮಾತೆಯರು ಸೀತೆಯರಾಗಿ ಸರಕಾರವನ್ನು ಧ್ವಂಸ ಮಾಡಬೇಕಾಗಬಹುದು – ಶಾಸಕಿ ಭಾಗೀರಥಿ ಮುರುಳ್ಯ ಎಚ್ಚರಿಕೆ
ಪುತ್ತೂರು ಜನವರಿ 03 : ರಾಮನ ಕೆಲಸ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನ ಸಿದ್ಧರಾಮಯ್ಯ ಸರಕಾರ ಮಾಡಿದರೆ ಲಂಕೆಯ ಉದಾಹರಣೆಯ ಮೂಲಕ ಸರಕಾರಕ್ಕೆ ಪ್ರತಿ ಉತ್ತರ ನೀಡಬೇಕಾಗಬಹುದು ಎಂದು ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ವಿರುದ್ಧ ಹಾಗೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಇಲ್ಲಿನ ದರ್ಬೆ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ನಡೆಸಿದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಏಜೆಂಟರ ಮೂಲಕ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರ ಓಟಿಗೋಸ್ಕರ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ. ದೇಶದಲ್ಲಿ ರಾಮನ ನಾಡು ನಿರ್ಮಾಣವಾಗುತ್ತಿದೆಯೇ ಹೊರತು ರಾವಣನ ನಾಡು ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಸಿದ್ಧರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರ ಮಂದಿರ ನಿರ್ಮಾಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಭ್ರಮದಿಂದ ಇರಬೇಕಾದ ಅಸಂಖ್ಯಾತ ಹಿಂದೂಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಿದ್ಧರಾಮಯ್ಯನವರಿಗೆ ತಾಕತ್ತಿದ್ದರೆ ರಾಮರಾಜ್ಯ ನಿರ್ಮಾಣದ ಕನಸು ತಡೆಯಲಿ ಎಂದು ಸವಾಲು ಎಸೆದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಸಂದರ್ಭದಲ್ಲಿ 32 ವರ್ಷಗಳ ಹಿಂದೆ ರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸುವ ಕೆಲಸ ಸಿದ್ಧರಾಮಯ್ಯ ಸರಕಾರದಿಂದ ಆಗುತ್ತಿದೆ. ಈ ಮೂಲಕ ಹಿಂದೂಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸೀತೆ ರಾಮನ ಜತೆಗೂಡಿ ರಾವಣನನ್ನು ಹೇಗೆ ಧ್ವಂಸ ಮಾಡಿದ್ದಾರೆ ಅದೇ ರೀತಿಯ ಉತ್ತರ ನೀಡಲು ಮಾತೆಯರು ಸೀತೆಯರಾಗಿ ಸರಕಾರವನ್ನು ಧ್ವಂಸ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.