DAKSHINA KANNADA
ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗೆ ಅನುದಾನ ಕಡಿತ: ಪಾಪ್ಯುಲರ್ ಫ್ರಂಟ್ ಖಂಡನೆ

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗೆ ಅನುದಾನ ಕಡಿತ: ಪಾಪ್ಯುಲರ್ ಫ್ರಂಟ್ ಖಂಡನೆ
ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಅನುದಾನದ ಪೈಕಿ 2020-21ನೆ ಆರ್ಥಿಕ ವರ್ಷದಲ್ಲಿ ಸುಮಾರು 468 ಕೋಟಿ ರೂಪಾಯಿ ಮೊತ್ತವನ್ನು ಕಡಿತಗೊಳಿಸಲು ತೀರ್ಮಾನಿಸಿರುವ ರಾಜ್ಯ ಬಿಜೆಪಿ ಸರಕಾರದ ಕ್ರಮವು ಖಂಡನಾರ್ಹ.
ಇದು ಸಂಪತ್ತಿನ ಸಮಾನ ಹಂಚಿಕೆ ಮತ್ತು ಮುಸ್ಲಿಮ್ ಸಮುದಾಯದ ಸಬಲೀಕರಣವನ್ನು ತಡೆಯುವ ಫ್ಯಾಶಿಷ್ಟ್ ತಂತ್ರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಟೀಕಿಸಿದ್ದಾರೆ.

ಕಲ್ಯಾಣ ರಾಜ್ಯ ಎಂಬ ಪರಿಕಲ್ಪನೆಯ ಅಡಿಯಲ್ಲಿ ಆಡಳಿತ ನಡೆಸಬೇಕಾದದ್ದು ಸರಕಾರದ ಜವಾಬ್ದಾರಿಯಾಗಿದೆ.
ಪ್ರಮುಖವಾಗಿ ಮುಸ್ಲಿಮ್ ಸಮುದಾಯ ಭವನ (ಶಾದಿ ಮಹಲ್), ಅಲ್ಪಸಂಖ್ಯಾತರ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ, ಶಾದಿ ಭಾಗ್ಯ ಯೋಜನೆ, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳು, ಜೈನ್, ಬೌದ್ಧ ಮತ್ತು ಸಿಖ್ ಸಮುದಾಯಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವಿನ ಯೋಜನೆಗಳಿಗೆ ಅನುದಾನವನ್ನು ರದ್ದುಗೊಳಿಸಿರುವುದು ಸರಕಾರ ದ ಪಕ್ಷಪಾತಿ ಧೋರಣೆಯಾಗಿದೆ.
ಬಿಜೆಪಿ ಸರಕಾರವು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಮೊತ್ತವನ್ನೂ ಹಂತಹಂತವಾಗಿ ಕಡಿತಗೊಳಿಸುತ್ತಾ ಬರುತ್ತಿದೆ.
ಸರಕಾರದ ಈ ರೀತಿಯ ಧೋರಣೆಯು ಅವಕಾಶ ವಂಚಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ತಡೆಹಿಡಿದಂತಾಗುತ್ತದೆ.
ಈಗಾಗಲೇ ಅಲ್ಪಸಂಖ್ಯಾತ ಸಮುದಾಯ ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಸಬಲೀಕರಣಕ್ಕಾಗಿ ರಂಗನಾಥ್ ಮಿಶ್ರಾ, ಸಾಚಾರ್ ಆಯೋಗಗಳು ಹಲವು ಅಭಿವೃದ್ಧಿ ಯೋಜನೆಗಳ ಶಿಫಾರಸುಗಳನ್ನು ಮಾಡಿದ್ದರೂ ಇದಕ್ಕೆ ವ್ಯತಿರಿಕ್ತವಾಗಿ ಯಡಿಯೂರಪ್ಪ ಸರಕಾರವು ದ್ವೇಷ ರಾಜಕಾರಣ ನಡೆಸುತ್ತಿದೆ.
ಜನರು ಸರಕಾರದಿಂದ ತಮಗೆ ಅರ್ಹವಾಗಿ ಸಿಗಬೇಕಾದ ಹಕ್ಕು, ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅಗತ್ಯತೆಯನ್ನು ಪ್ರಸಕ್ತ ಬಿಜೆಪಿ ಸರಕಾರದ ತೀರ್ಮಾನವು ಸ್ಪಷ್ಟಪಡಿಸಿದೆ ಎಂದು ನಾಸಿರ್ ಪಾಶ ಹೇಳಿದ್ದಾರೆ.