ಮಂಗಳೂರು ಅಗಸ್ಟ್ 08: ಧರ್ಮಸ್ಥಳದ ಪ್ರಕರಣದಲ್ಲಿ ಅನಾಮಿಕ ದೂರುದಾರನ ಮೇಲೆ ನಮಗೆ ಸಂಶಯವಿದ್ದು ಆತನ ಮಂಪರು ಪರೀಕ್ಷೆ ನಡೆಸಬೇಕೆಂದು ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳವನ್ನು ತೇಜೋವಧೆ ಮಾಡುವ ಕೆಲಸವನ್ನು ಮಾಡಲಾಗುತ್ತಿದ್ದು, ಇದು ಹೀಗೆ ಮುಂದವರಿದರೆ ಹಿಂದೂ ಸಮಾಜ ಜೊತೆಗೂಡಿ ಹೋರಾಟ ನಡೆಸಲಿದೆ ಎಂದರು.

ಇತ್ತೀಚೆಗೆ ಬಂದ ಆರೋಪದ ಮೇಲೆ ನಡೆಯುತ್ತಿರುವ ಎಸ್ ಐಟಿ ತನಿಖೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಆದರೆ ದೂರುದಾರನ ಮೇಲೆ ನಮಗೆ ಸಂಶಯ ಬರುತ್ತಿದ್ದು, ತನಿಖೆಯಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆಯನ್ನು ಮಾಡಬೇಕು ಎಂದು ಒತ್ತಾಯಿಸಿದ್ದರು.
ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್ಐಟಿಗೆ ಹಸ್ತಾಂತರಿಸಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಎಸ್ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿದೆ. ಇದೆಲ್ಲವೂ ಹಿಂದುಗಳ ಶ್ರದ್ಧಾಕೇಂದ್ರಗಳನ್ನು ದಮನಿಸುವ ಷಡ್ಯಂತರದ ಭಾಗವೇ ಆಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಷಡ್ಯಂತ್ರಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು.