DAKSHINA KANNADA
ಪುತ್ತೂರು -ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ದ ಹಿಂದೂ ಕಾರ್ಯಕರ್ತರ ಆಕ್ರೋಶ
ಉಪ್ಪಿನಂಗಡಿ ಎಪ್ರಿಲ್ 06: ಗುಂಡ್ಯ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಕಾರ್ಯಕರ್ತರ ಪರ ನಿಲ್ಲದ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ದ.ಕ ಜಿಲ್ಲೆಯ ಉಪ್ಪಿನಂಗಡಿ ಬಳಿ ಶಾಸಕ ಸಂಜೀವ ಮಠಂದೂರು ತಡೆದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಗುಂಡ್ಯದ ಸಿರಿಬಾಗಿಲಿನ ಪೆರಾಜೆ ಎಂಬಲ್ಲಿ ಜೋಡಿಯೊಂದು ತಿರುಗಾಡಿಕೊಂಡಿದ್ದು ಈ ಸಂದರ್ಭ ಅವರನ್ನು ಪ್ರಶ್ನಿಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಅವರನ್ನು ಪೋಲಿಸರಿಗೊಪ್ಪಿಸಿದ್ದರು. ಬಳಿಕ ಯುವತಿಯೊಂದಿಗೆ ಇದ್ದ ನಝೀರ್ ಎಂಬಾತ ತನಗೆ ಹಲ್ಲೆ ನಡೆಸಿದ್ದಾರೆಂದು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಾಲಚಂದ್ರ (35) ಹಾಗೂ ರಂಜಿತ್(31) ಎಂಬವರನ್ನು ಬಂಧಿಸಲಾಗಿದ್ದು, ಇದರಿಂದ ಆಕ್ರೋಶಗೊಂಡ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ʼʼತಾವು ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದರೂ, ನಮಗೆ ಬಿಜೆಪಿಯ ಶಾಸಕರು ಬೆಂಬಲ ನೀಡಿಲ್ಲʼʼವೆಂದು ಆಕ್ರೋಶ ವ್ಯಕ್ತಪಡಿಸಿ ತಡರಾತ್ರಿ ಉಪ್ಪಿನಂಗಡಿ ಬಳಿ, ಬೆಂಗಳೂರಿಗೆ ತೆರಳಲು ಬಸ್ಸು ಹತ್ತುವ ವೇಳೆಗೆ ಶಾಸಕ ಸಂಜೀವ ಮಠಂದೂರು ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರಿಗೆ ದಿಕ್ಕಾರ ಕೂಗಿದರು.