LATEST NEWS
ಕಾರ್ಕಳ ಕ್ವಾರಂಟೈನ್ ಕೇಂದ್ರದಲ್ಲಿ ಬಿಜೆಪಿ ಮುಖಂಡರ ಬರ್ತ್ ಡೇ ಪಾರ್ಟಿ

ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಕಾಂಗ್ರೇಸ್ ಆಗ್ರಹ
ಉಡುಪಿ ಜೂನ್ 4: ಕೊರೊನಾ ಪ್ರಕರಣಗಳಲ್ಲಿ ರಾಜ್ಯದಲ್ಲೆ ನಂಬರ್ 1 ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳು ಮೋಜು ಮಸ್ತಿಯ ಅಡ್ಡೆಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂಬ ಪ್ರಶ್ನೆ ಇದೀಗ ಮೂಡಲಾರಂಭಿಸಿದೆ. ಮೇ 22 ರಂದು ಕಾರ್ಕಳ ಕ್ವಾರಂಟೈನ್ ಕೇಂದ್ರವೊಂದರಲ್ಲಿ ನಡೆದ ಬಿಜೆಪಿ ಮುಖಂಡರ ಬರ್ತ್ ಡೇ ಪಾರ್ಟಿ ಈಗ ವಿವಾದಕ್ಕೆ ಕಾರಣವಾಗಿದೆ.
ಕಾರ್ಕಳದ ಸಾಣೂರು ಪ್ರಕೃತಿ ಆಂಗ್ಲಮಾದ್ಯಮ ಶಾಲೆಯಲ್ಲಿ ಮಂಬೈಯಿಂದ ಆಗಮಿಸಿರುವ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಈ ಶಾಲೆಯಲ್ಲಿ ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತರು ಸ್ವಯಂಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಅದರಲ್ಲಿ ಒಬ್ಬ ಕಾರ್ಯಕರ್ತನ ಹುಟ್ಟುಹಬ್ಬವನ್ನು ಮೇ 22 ರಂದು ಇದೇ ಕ್ವಾರಂಟೈನ್ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ಬಿಜೆಪಿ ಯುವ ಮೋರ್ಚಾ ಅದ್ಯಕ್ಷ ಕರುಣಾಕರ ಕೋಟ್ಯಾನ್, ಕಾಂತಾವರ ಪಂಚಾಯತ್ ಅದ್ಯಕ್ಷ ರಾಜೇಶ್ ಕೋಟ್ಯಾನ್, ಯುವ ಮೋರ್ಚಾ ಕಾರ್ಯದರ್ಶಿ ನವೀನ್ ಕಾಂತಾವರ ಕ್ವಾರಂಟೈನ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಪಾಲ್ಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಭಾರಿ ವಿವಾದಕ್ಕೀಡಾಗಿದೆ.
ಯಾವುದೇ ಸಾಮಾಜಿಕ ಅಂತರ ವಿಲ್ಲದೆ ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ಆಯೋಜಿಸಿದ್ದರ ವಿರುದ್ದ ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದು ಉಡುಪಿ ಯುವ ಕಾಂಗ್ರೇಸ್ ಘಟಕ ಆಗ್ರಹಿಸಿದೆ.