DAKSHINA KANNADA
ಬಿಜೆಪಿ ಮುಖಂಡ- ಮಹಿಳೆಯ ಆಡಿಯೋ ಬಾಂಬ್ ಗೆ ಕರಾವಳಿ ತಲ್ಲಣ, ಠಾಣೆ ಮೆಟ್ಟಿಲೇರಿದ ಮಹಿಳೆ – ಮಾನಹಾನಿ ವರದಿ ಪ್ರಕಟಿಸದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದ ಅರುಣ್ ಕುಮಾರ್ ಪುತ್ತಿಲ..!
ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡ ಮತ್ತು ಮಹಿಳೆಯ ಮಧ್ಯೆಯ ಸಂಭಾಷಣೆಯ ಆಡಿಯೋ ಬಾಂಬ್ ಗೆ ಕರಾವಳಿ ತಲ್ಲಣಗೊಂಡಿದ್ದು ಮಹಿಳೆ ಪೊಲೀಸ್ ಠಾಣೆ ಮೆಟ್ಟಲೇರಿದ್ರೆ, ಅರುಣ್ ಕುಮಾರ್ ಪುತ್ತಿಲ ಕೋರ್ಟ್ ಮೊರೆ ಹೋಗಿದ್ದಾರೆ.
ಕರಾವಳಿಯಲ್ಲಿ ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ಆಡಿಯೋಗೆ ಸಂಬಂಧಿಸಿ ಇದೀಗ ಬೆದರಿಕೆ ಕರೆಗಳು ಬರುವ ಹಂತಕ್ಕೆ ತಲುಪಿದೆ. ಹೌದು ಮೂಲತಃ ಶಿರಸಿ ಮೂಲದ ಮಹಿಳೆ ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯವಿದ್ದಾರೆ. ಮಹಿಳೆ ಮತ್ತು ಪುತ್ತಿಲ ಅವರು ಮಾತನಾಡಿದ ಆಡಿಯೋ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆದರಿಕೆಗೆ ಸಂಬಂಧಿಸಿ ಆರೋಪ ಮಾಡಿರುವ ಮಹಿಳೆ ನಿನ್ನೆ ರಾತ್ರಿ ಪುತ್ತಿಲ ಪರಿವಾರದ ಮಾಜಿ ಸದಸ್ಯ ರಾಜಾರಾಂ ಭಟ್ ಅವರೊಂದಿಗೆ ಪುತ್ತೂರು ನಗರ ಠಾಣೆಗೆ ಆಗಮಿಸಿದ್ದರು. ಆಡಿಯೋ ಸಂಬಂಧ ಹಲವಾರು ಬೆದರಿಕೆ ಕರೆಗಳು ಬರುತ್ತಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಇನ್ನು ಮಹಿಳೆ ಪೊಲೀಸ್ ಠಾಣೆಯಿಂದ ಮನೆಗೆ ಹಿಂತಿರುಗಿದಾಗ ಪೊಲೀಸರು ಭದ್ರತೆ ನೀಡಿದ್ದಾರೆ.
ಸದ್ಯ ಈ ಆಡಿಯೋ ಬೆದರಿಕೆಗೆ ಸಂಬಂಧಿಸಿ ಸಂತ್ರಸ್ತೆ ಮಹಿಳೆಗೆ ಸೂಕ್ತ ಭದ್ರತೆ ಒದಗಿಸುವಂತೆ ಗೃಹ ಇಲಾಖೆ ಪುತ್ತೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ದೂರು ನೀಡಿದ ಮರುದಿನವೇ ಅರುಣ್ ಕುಮಾರ್ ಪುತ್ತಿಲ ತನ್ನ ವಿರುದ್ಧದ ಮಾನಹಾನಿ ಮತ್ತು ತೇಜೋವಧೆ ವರದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.