LATEST NEWS
ತನ್ನ ಸ್ವಂತ ಮಗಳ ಮೇಲೆ ಬಾಯ್ ಪ್ರೆಂಡ್ ನಿಂದ ಅತ್ಯಾಚಾರ ಮಾಡಿಸಿದ ಬಿಜೆಪಿ ನಾಯಕಿ ಅರೆಸ್ಟ್

ಹರಿದ್ವಾರ ಜೂನ್ 06: ತನ್ನ ಸ್ವಂತ 13 ವರ್ಷ ಅಪ್ರಾಪ್ತ ಮಗಳ ಮೇಲೆ ತನ್ನ ಬಾಯ್ ಪ್ರೆಂಡ್ ನಿಂದ ಅತ್ಯಾಚಾರ ಮಾಡಿಸಿದ ಆರೋಪದ ಮೇಲೆ ಬಿಜೆಪಿ ನಾಯಕಿ ಮತ್ತು ಆಕೆಯ ಗೆಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ. ಘಟನೆ ಸಂಬಂಧ ಅನಾಮಿಕಾ, ಆಕೆಯ ಬಾಯ್‌ಫ್ರೆಂಡ್ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ಆಕೆಯನ್ನ ಪಕ್ಷದಿಂದಲೇ ವಜಾ ಮಾಡಿದೆ.
ಅಪ್ರಾಪ್ತ ಬಾಲಕಿ ತನ್ನ ತಂದೆಗೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿದಾಗ ವಿಷಯ ಬೆಳಕಿಗೆ ಬಂದಿದ್ದು, ನಂತರ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಹರಿದ್ವಾರ ಎಸ್‌ಎಸ್‌ಪಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟ ನಂತರ, ಬುಧವಾರ ಇಲ್ಲಿನ ಹೋಟೆಲ್ ಒಂದರಿಂದ ಅನಾಮಿಕಾ ಶರ್ಮಾ ಮತ್ತು ಆಕೆಯ ಗೆಳೆಯ ಸುಮಿತ್ ಪಟ್ವಾಲ್ ಅವರನ್ನು ಬಂಧಿಸಲಾಯಿತು ಎಂದು ದೋಭಾಲ್ ತಿಳಿಸಿದ್ದಾರೆ.

ಸುಮಿತ್‌ನ ಸಹಚರ ಶುಭಂನನ್ನು ಬಂಧಿಸಲು ಶೋಧ ನಡೆಯುತ್ತಿದೆ. ಅನಾಮಿಕಾ ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ಹರಿದ್ವಾರ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದರು, ಆದರೆ, ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ನಂತರ, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಯಿತು. ಆಗಸ್ಟ್ 2024 ರಿಂದ ಅವರು ಯಾವುದೇ ಪಕ್ಷದ ಹುದ್ದೆಯನ್ನು ಅಲಂಕರಿಸಿಲ್ಲ ಎಂದು ಇಲ್ಲಿನ ಬಿಜೆಪಿ ಮೂಲಗಳು ಹೇಳಿಕೊಂಡಿವೆ. ಪೊಲೀಸರ ಪ್ರಕಾರ, ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಹರಿದ್ವಾರ, ಆಗ್ರಾ ಮತ್ತು ವೃಂದಾವನದಲ್ಲಿ ಆಕೆಯ ತಾಯಿಯ ಗೆಳೆಯ ಮತ್ತು ಮೂವತ್ತರ ಹರೆಯದ ಆತನ ಸಹಾಯಕ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆಕೆಯ ತಾಯಿಯ ಒಪ್ಪಿಗೆಯೊಂದಿಗೆ ಮತ್ತು ಆಕೆಯ ಸಮ್ಮುಖದಲ್ಲೇ ಆ ಪುರುಷರು ಈ ಅಪರಾಧವನ್ನು ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ, ಅಪ್ರಾಪ್ತ ಬಾಲಕಿಯ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಾಮಿಕಾ ತನ್ನ ಪತಿಯಿಂದ ಬೇರ್ಪಟ್ಟು ತನ್ನ ಗೆಳೆಯನ ಹೋಟೆಲ್‌ನಲ್ಲಿ ವಾಸಿಸುತ್ತಿದ್ದಳು.