KARNATAKA
ರಾಜ್ಯ ಬಿಜೆಪಿಗೆ ಹೈಕಮಾಂಡ್ ಶಾಕ್….. !! ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಸೀಟ್
ರಾಜ್ಯಸಭೆಗೆ ಚಾಲ್ತಿಯಲ್ಲೇ ಇಲ್ಲದ ಹೆಸರು
ಬೆಂಗಳೂರು, ಜೂನ್ 8: ರಾಜ್ಯಸಭೆಗೆ ಮೂವರು ಪ್ರಭಾವಿಗಳ ಹೆಸರನ್ನು ಶಿಫಾರಸು ಮಾಡಿದ್ದ ರಾಜ್ಯ ಬಿಜೆಪಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಬೆಳಗಾವಿ ಮೂಲದ ಈರಣ್ಣ ಕದಡಿ ಮತ್ತು ರಾಯಚೂರು ಮೂಲದ ಅಶೋಕ್ ಗಸ್ತಿ ಎಂಬ ಇಬ್ಬರು ತಳಮಟ್ಟದ ಕಾರ್ಯಕರ್ತರನ್ನು ರಾಜ್ಯಸಭೆ ಅಭ್ಯರ್ಥಿಯಾಗಿಸಿ ಅಚ್ಚರಿ ಮೂಡಿಸಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ಈರಣ್ಣ ಕದಡಿ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಹೆಸರು ಮಾಡಿದ್ದಾರೆ. ಸವಿತಾ ಸಮಾಜದ ಅಶೋಕ್ ಗಸ್ತಿ ರಾಯಚೂರು ಜಿಲ್ಲೆಯಲ್ಲಿ ಓಬಿಸಿ ಮೋರ್ಚಾದಲ್ಲಿ ಕಾರ್ಯದರ್ಶಿಯಾಗಿದ್ದರು.
ಇಬ್ಬರು ತಳಮಟ್ಟದ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಆಗಿದೆ.
ಬಿಜೆಪಿ ರಾಜ್ಯ ಘಟಕ ಶನಿವಾರ ಸಂಜೆ ಕೋರ್ ಕಮಿಟಿ ಸಭೆಯಲ್ಲಿ ಶಿಕ್ಷಣೋದ್ಯಮಿ ಪ್ರಭಾಕರ ಕೋರೆ, ಹೊಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ರಮೇಶ್ ಕತ್ತಿ ಹೆಸರನ್ನು ರಾಜ್ಯಸಭೆ ಅಭ್ಯರ್ಥಿಯಾಗಿಸಿ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಬಿಜೆಪಿಯ ಹೆಸರು ಹಣಕ್ಕೆ ಮಣೆ ಹಾಕದ ಬಿಜೆಪಿ ಹೈಕಮಾಂಡ್, ಯಾರೂ ನಿರೀಕ್ಷೆಯೇ ಮಾಡಿರದ ಮತ್ತು ಚಾಲ್ತಿಯಲ್ಲೇ ಇಲ್ಲದ ಇಬ್ಬರ ಹೆಸರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿಯ ಸಂದೇಶ ರವಾನೆ ಮಾಡಿದೆ.
ಈ ಹಿಂದೆ ಇನ್ ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ತೇಜಸ್ವಿನಿ ಅನಂತ್ ಕುಮಾರ್, ಐಸಿಸಿಐ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್, ವಿಜಯ ಸಂಕೇಶ್ವರ ಹೆಸರು ರಾಜ್ಯಸಭೆಗೆ ಕೇಳಿಬಂದಿತ್ತು. ಎರಡು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಪ್ರಭಾಕರ ಕೋರೆಗೆ ಈ ಬಾರಿ ಬೇಡ ಎನ್ನುವ ಮಾತೂ ಕೇಳಿಬಂದಿತ್ತು. ಆದರೆ, ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಭಾಕರ ಕೋರೆ, ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ರಮೇಶ್ ಕತ್ತಿ ಹೆಸರನ್ನು ಶಿಫಾರಸು ಮಾಡಲಾಗಿತ್ತು.
ಅದಕ್ಕೂ ಮುನ್ನ ರಮೇಶ್ ಕತ್ತಿ ಸೋದರರು ರಾಜ್ಯಸಭೆ ಟಿಕೆಟಿಗಾಗಿ ಭಾರೀ ಲಾಬಿ ನಡೆಸಿದ್ದಲ್ಲದೆ, ಸಿಎಂ ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹೇರಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಯಾರೂ ನಿರೀಕ್ಷೆ ಮಾಡಿರದ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ರಾಜ್ಯ ಬಿಜೆಪಿಗೆ ಶಾಕ್ ನೀಡಿದೆ. ಅಲ್ಲದೆ, ತಳಮಟ್ಟದ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ನಡೆಯನ್ನು ಅಚ್ಚರಿಯಿಂದ ನೋಡುವಂತೆ ಮಾಡಿದೆ.