DAKSHINA KANNADA
ಮೇಯರ್ ಗೆ ಕುತ್ತಾದ ಪೆಟ್ಟು, ಬಿಜೆಪಿಯಿಂದ ರಾಜೀನಾಮೆಗೆ ಪಟ್ಟು

ಮೇಯರ್ ಗೆ ಕುತ್ತಾದ ಪೆಟ್ಟು, ಬಿಜೆಪಿಯಿಂದ ರಾಜೀನಾಮೆಗೆ ಪಟ್ಟು
ಮಂಗಳೂರು,ಅಕ್ಟೋಬರ್ 28: ಮೇಯರ್ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ .ಈ ಘಟನೆಯ ಬಳಿಕ ಬಿಜೆಪಿಯ ಮುಖಂಡರು ಮೇಯರ್ ವಾಸವಿರುವ ಅಪಾರ್ಟ್ ಮೆಂಟ್ ಗೆ ತೆರಳಿ ವಾಚ್ ಮನ್ ಹಾಗೂ ಆಕೆ ಪತ್ನಿಯ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ . ಅದಲ್ಲದೆ ಸಂತ್ರಸ್ತರ ಬೆಂಬಲಕ್ಕೆ ನಿಂತಿರುವ ಮಂಗಳೂರು ಮಹಾನಗರ ಪಾಲಿಕೆ ಯ ವಿರೋಧ ಪಕ್ಷದ ಬಿಜೆಪಿ ಮುಖಂಡರು ಮೇಯರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಸಹಕಾರ ನೀಡಿದ್ದಾರೆ.ಮೇಯರ್ ಹಲ್ಲೆ ಪ್ರಕರಣ ಕ್ಕೆ ಬಿಜೆಪಿ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದು ಪಾಲಿಕೆ ಇತಿಹಾಸದಲ್ಲಿದೆ ಮೊದಲ ಬಾರಿಗೆ ಮೇಯರ್ ಒಬ್ಬರು ಈ ರೀತಿ ವರ್ತನೆ ತೋರಿದ್ದಾರೆ . ಈ ಮೂಲಕ ಮಂಗಳೂರಿಗೆ ಮೇಯರ್ ಕವಿತಾ ಸನಿಲ್ ಕಳಂಕ ತಂದಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಮೇಯರ್ ಕವಿತಾ ಸನಿಲ್ ತಾವು ವಾಸಿಸಿರುವ ಅಪಾರ್ಟ್ ಮೆಂಟ್ ನ ವಾಚ್ ಮನ್ ಹಾಗೂ ಅವರ ಪತ್ನಿ ಮಗುವಿನ ಮೇಲೆ ಹಲ್ಲೆ ಮಾಡಿರುವ ಆರೋಪ ವನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಮುಖಂಡರಾದ ಪೂಜಾ ಪೈ ಹಾಗೂ ರೂಪಾ ಬಂಗೇರ ಅಪಾರ್ಟ್ ಮೆಂಟ್ ಗೆ ಆಗಮಿಸಿ ವಾಚ್ ಮೆನ್ ಹಾಗೂ ಅವರ ಕುಟುಂಬಕ್ಕೆ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲು ಪ್ರೋತ್ಸಾಹಿಸಿದ್ದಾರೆ. ಈ ಎಲ್ಲ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತು ಮಾಧ್ಯಮಗೋಷ್ಠಿಯಲ್ಲಿ ಇಂದು ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ಮೇಯರ್ ಕವಿತಾ ಸನಿಲ್ ಪ್ರಕರಣದ ಗಂಭೀರತೆಯನ್ನು ಅರಿತು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ . ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಮಾನವೀಯತೆಯ ನೆಲೆಯಲ್ಲಿ ವಾಚ್ಮನ್ ಕುಟುಂಬಕ್ಕೆ ಬಿಜೆಪಿ ಮುಖಂಡರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು. ಮಗುವಿನ ಮೇಲೂ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕು ಕಲ್ಯಾಣ ಸಮಿತಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು. ಅಮಾಯಕ ಮಹಿಳೆಯ ಮೇಲೆ ಮೇಯರ್ ತೋರಿದ ದರ್ಪದ ವಿರುದ್ಧ ಮುಂಬರುವ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

ಈ ನಡುವೆ ಬಿಜೆಪಿ ಕಾರ್ಪೊರೇಟರ್ ರೂಪಾ ಡಿ ಬಂಗೇರ ಮೇಯರ್ ಕವಿತಾ ಸನಿಲ್ ಗೂಂಡಾಗಿರಿಯ ಇತಿಹಾಸವನ್ನು ಬಯಲಿಗೆಳೆದಿದ್ದಾರೆ. ಕವಿತಾ ಸನೀಲ್ ಅವರು ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಸಾಯಿ ಸಮಿತಿ ಅಧ್ಯಕ್ಷೆಯಾಗುದ್ದ ಸಂದರ್ಭದಲ್ಲಿ ಮಂಗಳೂರು ಬಿಜೈ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಹಿತೇಶ್ ಪೂಜಾರಿ ಎಂಬಾತನಿಗೆ ಇಬ್ಬರು ಯುವಕರೊಂದಿಗೆ ಸೇರಿ ಕವಿತಾ ಸನೀಲ್ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.ಈ ಕುರಿತು ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರತಿಯನ್ನು ಕೂಡ ಕಾರ್ಪೊರೇಟರ್ ರೂಪಾ ಡಿ ಬಂಗೇರ ಪ್ರದರ್ಶಿಸಿದರು .
ಒಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಕ್ರಮಗಳ ವಿರುದ್ಧ ದಾಳಿ ನಡೆಸಿ ಭೇಷ್ ಅನಿಸಿಕೊಂಡಿದ್ದ ಕವಿತಾ ಸನಿಲ್ ಅವರಿಗೆ ಇತ್ತೀಚೆಗೆ ಒಂದಾದ ಮೇಲೊಂದರಂತೆ ಪ್ರಕಾರ ಪ್ರಕರಣಗಳು ಸುತ್ತಿಕೊಳ್ಳುತ್ತಿದೆ. ಈ ನಡುವೆ ಮೇಯರ್ ಕವಿತಾ ಸನಿಲ್ ಅವರ ಅಸಲಿ ಮುಖವನ್ನು ಜನರಿಗೆ ತೋರಿಸುತ್ತೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಪಣತ್ತೊಟ್ಟಿರುವಂತಿದೆ.