ಎರಡು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸುತ್ತೇನೆ – ನಳಿನ್ ಕುಮಾರ್ ಕಟೀಲ್

ಮಂಗಳೂರು ಎಪ್ರಿಲ್ 11: ಲೋಕಸಭಾ ಚುನಾವಣೆಗೆ ಇನ್ನೇನು ಒಂದೇ ವಾರ ಬಾಕಿ ಇರುವಂತೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಮಂಗಳೂರು ತಾಲೂಕಿನ ಕಿನ್ನಿಗೋಳಿ, ಪಕ್ಷಿಕೆರೆ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದಾರೆ.

ಪೇಟೆಯ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ಬಿಜೆಪಿ ಕಾರ್ಯಕರ್ತರ ಜೊತೆ ತೆರಳಿ ಪ್ರಚಾರ ಅಭಿಯಾನ ನಡೆಸಿದ್ದಾರೆ. ಕಿನ್ನಿಗೋಳಿ ಪೇಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೋದಿ ಪೇಟ ತೊಟ್ಟುಕೊಂಡು ಜಾಥಾ ನಡೆಸಿದ್ದಾರೆ.

ಕರಾವಳಿ ಕೇಸರಿ ಪಡೆಯ ಶಕ್ತಿ ಕೇಂದ್ರವಾದರೂ, ಕೇಸರಿ ಅಭಿಯಾನ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಶಾಸಕರು, ಮುಖಂಡರು ಕಾರ್ಯಕರ್ತರ ಜೊತೆ ಮೋದಿ ಘೋಷಣೆ ಕೂಗುತ್ತಾ ಸಾಮಾನ್ಯ ಜನರಲ್ಲೂ ಮೋದಿ ಹವಾ ಎಬ್ಬಿಸುವ ಪ್ರಯತ್ನದಲ್ಲಿದ್ದಾರೆ.

ಅಭ್ಯರ್ಥಿ ನಳಿನ್ ಕುಮಾರ್ ಗೆ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರ ಬಿಜೆಪಿ ಮುಖಂಡರು ಸಾಥ್ ನೀಡಿದ್ರು. ಹಳ್ಳಿ ಹಳ್ಳಿಗಳಲ್ಲಿಯೂ ಇಂದು ಬಿಜೆಪಿ ಅಲೆ ಮೋದಿ ಅಲೆ ಬೀಸುತ್ತಿದೆ, ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಎಲ್ಲಾ ಕಡೆಗಳಲ್ಲಿಯೂ ಬಿಜೆಪಿ ಪರ ಜನ ಆಶೀರ್ವಾದಿಸಲು ತಯಾರಾಗಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಮೂರು ಸುತ್ತಿನ ಪ್ರವಾಸ ಮುಗಿಸಿದ್ದೇವೆ, ಸಂಪೂರ್ಣವಾದ ಜನ ಬೆಂಬಲ ಇದೆ, ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸುತ್ತೇವೆ ಎಂಬ ವಿಶ್ವಾಸ ಇದೆ.

ಮೂಲ್ಕಿ ಮೂಡಬಿದ್ರೆಯಲ್ಲೂ ನಲುವತ್ತು ಸಾವಿರ ಮತಗಳ ಲೀಡ್ ಸಿಗಲಿದೆ, ಇಂದು ಎಲ್ಲಾ ಸರ್ವೆಗಳೂ ಬಿಜೆಪಿ ಪರ ಇದೆ, ಈ ಬಾರಿ ದೇಶದಲ್ಲಿ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

VIDEO