KARNATAKA
ಬೆಂಗಳೂರು : ಅಪ್ರಾಪ್ತರಿಂದ ಬೈಕ್ ರೈಡ್, ಒಂದೇ ದಿನ 1800 ಪೋಷಕರಿಗೆ ದಂಡ ಹಾಕಿ ಎಚ್ಚರಿಸಿದ ಖಾಕಿ ಪಡೆ..!

ಬೆಂಗಳೂರು: ಅಪ್ರಾಪ್ತರು ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ಗುರುವಾರ ಒಂದೇ ದಿನ 1800 ಪೋಷಕರಿಗೆ ಬೆಂಗಳೂರು ಪೊಲೀಸರು ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.
18 ವರ್ಷ ತುಂಬದ ಚಾಲನಾ ಪರವಾನಗಿ ಹೊಂದಿಲ್ಲದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಬೈಕ್ ರೈಡ್ ಮಾಡುವಾಗ ಖಾಕಿ ಪಡೆ ಹಿಡಿದು ದಂಡ ಹಾಕಿದೆ. ಶಾಲಾ ಕಾಲೇಜುಗಳ ಬಳಿಯೇ ಬಂದ ಬೆಂಗಳೂರು ಸಂಚಾರಿ ಪೊಲೀಸರು ವಿದ್ಯಾರ್ಥಿಗಳು ತಂದ ವಾಹನಗಳನ್ನು ತಡೆದು ಡಿಎಲ್ ಹಾಗೂ ವಯಸ್ಸು ತಪಾಸಣೆ ಮಾಡಿದ್ದಾರೆ. ನಗರದ ಒಟ್ಟು 150ಕ್ಕೂ ಹೆಚ್ಚು ಶಾಲೆಗಳಲ್ಲಿ ಪೊಲೀಸರು ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಈ ವೇಳೆ ಸುಮಾರು 1800ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ. ಬಳಿಕ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದು ಮತ್ತೆ ಮರುಕಳಿಸಿದ್ರೆ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಶಾಲೆಗಳಿಂದ ಸುತ್ತೋಲೆ ಕೂಡ ಹೊರಡಿಸಲು ಸೂಚನೆ ನೀಡಿದ್ದಾರೆ. ಡಿಎಲ್ ಇಲ್ಲದ ಹಾಗೂ 18 ವರ್ಷ ತುಂಬದ ವಿದ್ಯಾರ್ಥಿಗಳು ಬೈಕ್ ತರದಂತೆ ಸುತ್ತೋಲೆ ಹೊರಡಿಸಬೇಕು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.
