LATEST NEWS
ಕಾವ್ಯಾ ಪರ ಇರುವ ಹೊರಾಟ ಕಿಚ್ಚು, ಸ್ಪೂರ್ತಿ ಪರ ಯಾಕಿಲ್ಲ
ಕಾವ್ಯಾ ಪರ ಇರುವ ಹೊರಾಟ ಕಿಚ್ಚು, ಸ್ಪೂರ್ತಿ ಪರ ಯಾಕಿಲ್ಲ
ಮಂಗಳೂರು ಸೆಪ್ಟೆಂಬರ್ 23: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿದೆ. ಜಸ್ಟಿಸ್ ಫಾರ್ ಕಾವ್ಯ ಸಂಘಟಿತ ಸಮಿತಿಯ ಅಡಿಯಲ್ಲಿ ಇಂದು ಮಂಗಳೂರಿನಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಕಾವ್ಯ ನಿಗೂಡ ಸಾವಿನ ರಹಸ್ಯ ಬಯಲು ಮಾಡುವಂತೆ ಒತ್ತಾಯಿಸಲಾಗಿದೆ.
ಕಾವ್ಯಳಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಆಳ್ವಾಸ್ ಕಾಲೇಜಿನ ವಿರುದ್ಧ ಧ್ವನಿ ಎತ್ತಿದ ಸಂಘಟನೆಗಳು, ಮಂಗಳೂರಿನ ಸ್ಫೂರ್ತಿ ಸತ್ತಾಗ ಯಾಕೆ ಮೌನವಾಗಿವೆ ಎಂಬ ಪ್ರಶ್ನೆ ಕೇಳಲಾಗುತ್ತಿದೆ.
ಸ್ಫೂರ್ತಿ ಹೆಣ್ಣುಮಗಳು, ತೀರಾ ಬಡ ಕುಟುಂಬದಿಂದ ಬಂದ ಯುವತಿ. ಅವಳು ದುಡಿದು ಮನೆಗೆ ಆಧಾರವಾಗಿ ನಿಂತು ತನ್ನ ಬಾಳನ್ನು ಕೂಡ ರೂಪಿಸಬೇಕು ಎಂದು ಹೊರಟಿದ್ದವಳು. ಅವಳು ಸತ್ತದ್ದು ತಾನು ಕೆಲಸ ಮಾಡುತ್ತಿದ್ದ ಕಡೆಯಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆ
ಸ್ಪೂರ್ತಿಗೂ ಈ ಸಂಘಟನೆಗಳು ನ್ಯಾಯ ಬೇಡವೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿವೆ. “ಎಲ್ಲಿ ಹೋಗಿದ್ದಿರಿ ಸಂಘಟನೆಗಳೇ. ಎಲ್ಲಿ ಹೋದ್ರಿ ಕಾವ್ಯಾಳ ಪರ ಮೊಸಳೆ ಕಣ್ಣೀರು ಹಾಕಿದವರೇ. ನೀವು ಕಾವ್ಯಾಳ ಪರ ಧ್ವನಿ ಎತ್ತಿದ್ದು ನಿಜಕ್ಕೂ ಸ್ವಾಗತಾರ್ಹ ವಿಷಯ. ಅವಳ ಸಾವಿನ ಕಾರಣ ಕೂಡ ಗೊತ್ತಾಗಬೇಕು. ಅಲ್ಲಿಯೂ ತಪ್ಪು ಮಾಡಿದ್ದು ಯಾರೇ ಇರಲಿ ಅದು ತಪ್ಪೇ. ಹಾಗಾದರೆ ಯುನಿಟಿ ಆಸ್ಪತ್ರೆಯವರು ಮಾಡಿದ್ದು ತಪ್ಪಲ್ವಾ? ಯುನಿಟಿ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟರೆ ಅದು ದೊಡ್ಡದಲ್ವಾ?” ಯುನಿಟಿ ಆಸ್ಪತ್ರೆಯ ವಿರುದ್ದ ಹೋರಾಟ ಯಾಕಿಲ್ಲ ಎನ್ನುವ ಪ್ರಶ್ನೆ ಹರಿದಾಡುತ್ತಿದೆ.
ಸ್ಪೂರ್ತಿ ಆತ್ಮಹತ್ಯೆ ಪ್ರಕರಣ ತನಿಖೆ ವಿಳಂಬ
ಕಾವ್ಯಾ ಯಾವ ಕಾರಣಕ್ಕೆ ಸತ್ತಳು ಎಂದು ಇನ್ನು ತನಿಖೆಯಾಗುತ್ತಿದೆ. ಆದರೆ ಸ್ಫೂರ್ತಿಯ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸಲಾಗಿಲ್ಲ. ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಮೇಲಾಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಸ್ಫೂರ್ತಿ ಬಾಯಿ ಬಿಟ್ಟು ತಾಯಿಯ ಹತ್ತಿರ ಹೇಳಿದ್ದಳು. ಸ್ಫೂರ್ತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಯೂನಿಟಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಲಾಗಿದೆ . ಆದರೆ ಈವರೆಗೆ ಯಾವುದೇ ತನಿಖೆ ನಡೆದಿಲ್ಲ .
ಇದೂ ಕೂಡ ಬಡ ಹೆಣ್ಣು ಮಗಳೊಬ್ಬಳಿಗೆ ಆದ ಘೋರ ಅನ್ಯಾಯ ವಲ್ಲವೆ? ಆಳ್ವಾಸ್ ವಿರುದ್ಧ ಪ್ರತಿಭಟನೆ ಎಂದೊಡನೆ ಒಮ್ಮೆಲೇ ಸಿಡಿದೆದ್ದ ಜಾತ್ಯತೀತ, ಸಮಾನ ಮನಸ್ಕ ಸಂಘಟನೆಗಳು ಸ್ಫೂರ್ತಿಯ ವಿಚಾರದಲ್ಲಿ ಯಾಕೆ ಅನ್ಯಾಯ ಎಸಗುತ್ತಿವೆ? ಇಲ್ಲಿ ಆಳ್ವಾಸ್ ಮತ್ತು ಯೂನಿಟಿ ಹೆಸರಿನ ನಡುವೆ ಈ ಸಂಘಟನೆಗಳು ಭೇದ ಭಾವ ಮಾಡುವುದಾದರೂ ಏಕೆ ? ಎಂಬ ಪ್ರಶ್ನೆ ಮೂಡುತ್ತಿದೆ .
ಉಳ್ಳಾಲದ ಉಚ್ಚಿಲದಲ್ಲಿ ತಾಯಿ ಮತ್ತು ತಂಗಿಯೊಂದಿಗೆ ಜೀವನ ನಡೆಸುತ್ತಿರುವ ಸ್ಫೂರ್ತಿಯ ಕುಟುಂಬಕ್ಕೆ ನ್ಯಾಯ ಬೇಡವೇ? ಎನ್ನುವ ಪ್ರಶ್ನೆಗಳು ಕಾಡತೊಡಗಿವೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಆರಂಭವಾಗಿದೆ. ಈ ಸತ್ಯಾಸತ್ಯೆಯ ಹುಡುಕಾಟದಲ್ಲಿ ಎಷ್ಟು ಜನರ ಮುಖವಾಡ ಕಳಚಲಿದೆ ಕಾದು ನೋಡಬೇಕಿದೆ.