LATEST NEWS
ಸಿಂಧೂ ನದಿ ನೀರು ಬಿಡದಿದ್ದರೆ ಅದರಲ್ಲಿ ನಿಮ್ಮ ರಕ್ತ ಹರಿಯುತ್ತದೆ – ಪಾಕ್ ನಾಯಕ ಬಿಲಾವಲ್ ಭುಟ್ಟೋ

ಲಾಹೋರ್ ಎಪ್ರಿಲ್ 26: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮಾರಣಹೋಮ ನಡೆಸಿದ ಭಯಯೋತ್ಪಾದಕರ ವಿರುದ್ದ ಭಾರತ ಕಠಿಣ ಕ್ರಮ ತೆಗೆದುಕೊಂಡಿದ್ದು, ಭಯೋತ್ಪಾದನೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಸರಿಯಾದ ಪೆಟ್ಟು ನೀಡಿದೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸಿರುವ ಭಾರತ ಸರಕಾರದ ಕ್ರಮಕ್ಕೆ ಇದೀಗ ಪಾಕಿಸ್ತಾನದ ನಾಯಕರು ಕಂಗೆಟ್ಟಿದ್ದು, ಸಾರ್ವಜನಿಕ ಸಭೆಗಳಲ್ಲಿ ಭಾರತದ ವಿರುದ್ದ ಕೆಂಡಕಾರುತ್ತಿದ್ದಾರೆ.
ಪಾಕ್ಗೆ ಸರಿಯಾಗಿ ಬುದ್ಧಿ ಕಳಿಸಲು ಭಾರತ ಸಿಂಧೂ ನದಿ ನೀರು ಬೀಡುವುದನ್ನು ನಿಲ್ಲಿಸಿದೆ. ಇದು ಪಾಕ್ಗೆ ದೊಡ್ಡ ಪೆಟ್ಟು ಬಿದ್ದಿದೆ. ಪಾಕ್ಗೆ ಎಲ್ಲದಕ್ಕೂ ಈ ನೀರೇ ಆಸರೆಯಾಗಿತ್ತು. ಆದರೆ ಇದೀಗ ಇದನ್ನೇ ಭಾರತ ಸರ್ಕಾರ ನಿಲ್ಲಿಸಿದೆ. ಭಾರತ ಸರ್ಕಾರದ ಈ ನಿರ್ಧಾರಕ್ಕೆ ಪಾಕ್ ಸರ್ಕಾರ ಕೆಂಡಕಾರುತ್ತಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಭಾರತದ ಈ ಕ್ರಮವನ್ನು ಟೀಕಿಸಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ-ಜರ್ದಾರಿ, ಸಿಂಧೂ ನಮ್ಮದು ಮತ್ತು ಅದು ನಮ್ಮದೇ ಆಗಿರುತ್ತದೆ. ನೀರು ಬಿಟ್ಟರೇ ಸರಿ ಇಲ್ಲದಿದ್ದರೆ ನಿಮ್ಮ ರಕ್ತ ಹರಿಯುತ್ತದೆ ಎನ್ನುವ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ಭಾರತದ ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಭುಟ್ಟೋ-ಜರ್ದಾರಿ ತುರ್ತು ಸಭೆ ನಡೆಸಿದ್ದಾರೆ. ಸಿಂಧೂ ನದಿಯ ನೀರು ಪಾಕ್ಗೆ ಎಷ್ಟು ಮುಖ್ಯ ಎನ್ನುವುದು ಈ ನಾಯಕರ ಮಾತಿನಿಂದ ಅರ್ಥವಾಗುತ್ತಿದೆ. ಸಿಂಧೂ ನದಿ ಪಾಕಿಸ್ತಾನ ಪ್ರಜೆಗಳ ಪಾಲಿಗೆ ಜೀವ ನದಿ, ಸಿಂಧೂ ನದಿ ನೀರನ್ನು ತಡೆದರೆ ತಕ್ಕ ಉತ್ತರ ನೀಡಬೇಕಾಗುತ್ತೆ. ಸಿಂಧೂ ನದಿ ನೀರನ್ನು ತಡೆಯುವ ಕೆಲಸ ಮಾಡಬಾರದು. ದೇಶದ ಸಮಗ್ರತೆ ಮತ್ತು ಭದ್ರತೆ ವಿಚಾರದಲ್ಲಿ ರಾಜಿಯಾಗಲ್ಲ,ಈ ವಿಚಾರದಲ್ಲಿ ಪಾಕ್ ಸೇನೆ ಮತ್ತು ನಮ್ಮ ನಿಲುವು ಒಂದೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಂದು ಹೇಳಿದ್ದಾರೆ.