LATEST NEWS
ಭಜನೆ ಬಗ್ಗೆ ಕೀಳು ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮಕ್ಕೆ ಭಜನಾ ಒಕ್ಕೂಟಗಳ ಆಗ್ರಹ
ಕಾರ್ಕಳ : ಭಜನೆ ಬಗ್ಗೆ ಕೀಳು ಹೇಳಿಕೆ ನೀಡುವವ ವಿರುದ್ಧ ಮತ್ತು ಆ ಹೇಳಿಕೆಗಳನ್ನು ಸಮರ್ಥಿಸುವವರ ವಿರುದ್ದ ಕಾನೂನು ಕ್ರಮಕ್ಕೆ ಭಜನಾ ಒಕ್ಕೂಟ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಬಗ್ಗೆ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಮತ್ತು ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಕಾರ್ಕಳ ತಾಲೂಕು ಘಟಕಗಳು ಜಂಟಿಯಾಗಿ ಕಾರ್ಕಳ ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಿವೆ. ಈ ಹೇಳಿಕೆಗಳು ಪೂರ್ವಾಗ್ರಹ ಪೀಡಿತವಾಗಿದ್ದು, ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಉದ್ದೇಶ ಹೊಂದಿವೆ. ಈ ರೀತಿಯ ಹಿಂದು ವಿರೋಧಿ ಹೇಳಿಕೆಗಳಿಂದಾಗಿ ಹಿಂದುಗಳ ಧಾರ್ಮಿಕ ಭಾವನೆಗೆ ಕೂಡಾ ಫಾಸಿಯಾಗುತ್ತಿದೆ. ಈ ರೀತಿಯ ಹೇಳಿಕೆಗಳನ್ನು ಈ ಕೂಡಲೇ ನಿಲ್ಲಿಸುವ ಅವಶ್ಯಕತೆಯಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಲವು ಭಜನಾ ತಂಡಗಳು ಭಜನೆ ನಡೆಸಿಕೊಂಡು ಬರುತ್ತಿವೆ. ಹಿಂದೂ ಧಾರ್ಮಿಕತೆಯ ಪ್ರತೀಕವಾದ ಭಜನಾ ಕಾರ್ಯಕ್ರಮಗಳಲ್ಲಿ ಜಾತಿ, ಧರ್ಮ, ಲಿಂಗ ಬೇಧ ಹಾಗೂ ವಯೋಮಿತಿಯ ನಿರ್ಬಂಧವಿಲ್ಲದೆ ಎಲ್ಲ ವರ್ಗದ ಜನರು ಭಾಗವಹಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿರುತ್ತದೆ. ಭಜನಾ ಕಾರ್ಯಕ್ರಮ ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಿಗೊಳ್ಳುವುದಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಬಾಂಧವ್ಯವನ್ನು ಬೆಸೆಯುತ್ತದೆ.ಆದರೆ ಇತ್ತೀಚಿನ ಕೆಲವು ದಿನಗಳಿಂದ ರಾಜಕೀಯ ಪ್ರೇರಿತ ಕೆಲವೊಂದು ವ್ಯಕ್ತಿಗಳು ಹಾಗೂ ಕೆಲವು ಸರಕಾರಿ ನೌಕರರು ಭಜನೆ ಕುರಿತು ಅಪ್ರಬುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕುಣಿತ ಭಜನೆಯ ಬಗ್ಗೆ ಮತ್ತು ಭಜನೆಯಲ್ಲಿ ಪಾಲ್ಗೊಲ್ಲುವ ಮಹಿಳೆಯರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳಿಂದಾಗಿ ಹೆಣ್ಣುಮಕ್ಕಳಿಗೆ ಹಾಗೂ ಭಜಕರಿಗೆ ಬೇಸರವಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಲ್ಲದೆ ಭಜನಾ ತಂಡಗಳನ್ನು ಜನ ಸಾಮಾನ್ಯರು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ ಎಂದು ಅವರು ಹೇಳಿದ್ದಾರೆ. ಈ ರೀತಿಯ ಹಿಂದೂ ವಿರೋಧಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಹೇಳಿಕೆಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯವರು ನೀಡದಂತೆ ಹಾಗೂ ಈ ರೀತಿಯ ಹೇಳಿಕೆಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸಮರ್ಥನೆ ಮಾಡುವುದನ್ನು ನಿರ್ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.