ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ರಾಜಧಾನಿಯಲ್ಲಿ ಮಹಿಳೆಯೋರ್ವಳನ್ನು ಬಲಿ ಪಡೆದರೆ, ಒಂದೂವರೆ ವರ್ಷದ ಪುಟ್ಟ ಮಗು ಮತ್ತು ಪತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ, ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ನೆಲಕ್ಕೆ ಉರುಳಿದವರ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಸೀಮಾ (21) ಸ್ಥಳದಲ್ಲೇ ಸಾವನ್ನಪ್ಪಿದರೆ, ಒಂದೂವರೆ ವರ್ಷದ ಹೆಣ್ಣು ಮಗು ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆ ಬಳಿಕ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ವಿಜಯನಗರ ಜಿಲ್ಲೆಯವರಾದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತಳ ಪತಿ ಗುರುಮೂರ್ತಿ ಸಿಂಗಸಂದ್ರದ ಬೆಸ್ಕಾಂ ಘಟಕದಲ್ಲಿ 8 ವರ್ಷದಿಂದ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.