KARNATAKA
ಬೆಂಗಳೂರು: 20 ವರ್ಷದಿಂದ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ

ಬೆಂಗಳೂರು, ಮಾರ್ಚ್ 13: ನಗರದ ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿಯ ಬಾಡಿಗೆ ಮನೆಯಲ್ಲಿ ಸುಮಾರು 20 ವರ್ಷಗಳಿಂದ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯ ಮೊಹಮ್ಮದ್ ಸಿದ್ದಿಕ್ (55) ಎಂಬಾತ ನನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
2006ರಲ್ಲಿ ಅಕ್ರಮವಾಗಿ ಸಿದ್ದಿಕ್ ಭಾರತಕ್ಕೆ ಬಂದಿದ್ದು, ಪಶ್ಚಿಮ ಬಂಗಾಲದ ಮೆಲ್ಸಾ ಜಿಲ್ಲೆಯ ಶಾಲೆಯೊಂದರಿಂದ ವರ್ಗಾವಣೆ ಪತ್ರ ಪಡೆದಂತೆ ನಕಲಿ ಪತ್ರ ತಯಾರಿಸಿಕೊಂಡಿದ್ದ. ಅದೇ ಪತ್ರವನ್ನು ಬಳಸಿಕೊಂಡು ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಸೇರಿ ಅಗತ್ಯ ದಾಖಲೆಗಳನ್ನು ಮಾಡಿಸಿಕೊಂಡಿದ್ದ.

ಇತ್ತೀಚೆಗೆ ಸ್ಥಳೀಯರು ಆತನ ಬಗ್ಗೆ ಮಾಹಿತಿ ನೀಡಿದ್ದರು. ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮೊಹಮ್ಮದ್ ಸಿದ್ಧಿಕ್ ತಾನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಳ್ಳುವ ಜತೆಗೆ ಹಣ ಪಡೆದುಕೊಂಡು ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದಿರುವ ಇತರ ವ್ಯಕ್ತಿಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವ ವಿಚಾರ ಗೊತ್ತಾಗಿದೆ.
ಅದಕ್ಕೆ ಪೂರಕ ವಾಗಿ ಆತನ ಮನೆಯಲ್ಲಿ 20 ಮಂದಿಗೆ ನಕಲಿ ದಾಖಲೆ ಮಾಡಿಸಿಕೊಟ್ಟಿರುವ ಮಾಹಿತಿ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.