BELTHANGADI
ಬೆಳ್ತಂಗಡಿ ; ಪುರಾತನ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆ, ಅನ್ಯಮತೀಯರ ವಶದಲ್ಲಿದ್ದ ದೇವಸ್ಥಾನದ ಭೂಮಿ ವಶಕ್ಕೆ ಪಡೆದ ಆಸ್ತಿಕರು..!
ಬೆಳ್ತಂಗಡಿ : ಅನ್ಯಧರ್ಮೀಯರ ವಶದಲ್ಲಿದ್ದ ಜಮೀನಿನಲ್ಲಿ ಸುಮಾರು 12 ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇರುವ ಬಗ್ಗೆ ಸ್ಥಳೀಯರು ಅಡಿಕೊಳ್ಳುತ್ತಿದ್ದರು.
ಆದರೆ ಆ ದೇವಸ್ಥಾನದ ಜಾಗವನ್ನು ಇತ್ತೀಚೆಗೆ ಸ್ಥಳೀಯ ಅನ್ಯಧರ್ಮೀಯ ನಿವಾಸಿಯೋರ್ವರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದ ಜನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಲ್ಲಿ ಈ ವಿಚಾರವನ್ನು ತಿಳಿಸಿದ್ದು, ವಿವಾದಿತ ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಆ ಜಾಗ ಸರಕಾರಿ ಭೂಮಿ ಎಂದು ತಿಳಿದುಬಂದಿತ್ತು. ಈ ಕಾರಣಕ್ಕಾಗಿ ಶಾಸಕರು ಸುಮಾರು 25 ಸೆಂಟ್ಸ್ ಜಾಗವನ್ನು ಅನ್ಯಮತೀಯ ವ್ಯಕ್ತಿಯ ವಶದಲ್ಲಿದ್ದ ಸುಮಾರು 25 ಸೆಂಟ್ಸ್ ಜಾಗವನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಮಾಡಿಕೊಂಡಿದ್ದರು. ಈ ಜಾಗದಲ್ಲಿದ್ದ ದೇವಸ್ಥಾನದ ವಿಗ್ರಹ ಸೇರಿದಂತೆ ಇತರ ವಸ್ತುಗಳನ್ನು ಭೂಮಿ ವಶಪಡಿಸಿಕೊಂಡ ವ್ಯಕ್ತಿ ಪಾಳು ಬಾವಿಯೊಂದಕ್ಕೆ ಎಸೆದಿದ್ದರು. ವಿವಾದಿತ ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿನಲ್ಲಿ ದಾಖಲೆಯಾಗುತ್ತಿದ್ದಂತೆ ಸ್ಥಳೀಯರು ಈ ಭೂಮಿಯಲ್ಲಿ ದೇವಸ್ಥಾನದ ಪಳಿಯುಳಿಕೆಗಳ ಬಗ್ಗೆ ಶೋಧನೆ ನಡೆಸಿದ್ದರು. ಇಂದು ವಿಗ್ರಹಗಳನ್ನು ಬಾವಿಗೆ ಹಾಕಲಾಗಿತ್ತು ಎನ್ನುವ ಬಾವಿಯನ್ನು ಅಗೆಯುವ ಸಂದರ್ಭದಲ್ಲಿ ಬಾವಿಯಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಗೋಪಾಲಕೃಷ್ಣ ಸ್ವಾಮಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಬಾವಿಯಿಂದ ದೇವರ ಮೂರ್ತಿಯನ್ನು ಹೊರತೆಗೆಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಸ್ಥಳೀಯರು ಜಯಘೋಷಗಳನ್ನು ಹಾಕುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಈ ದೇವಸ್ಥಾನದ ಭೂಮಿಗೆ ಸಂಬಂಧಪಟ್ಟಂತೆ ಭೂಮಿ ವಶಪಡಿಸಿಕೊಂಡಿದ್ದ ವ್ಯಕ್ತಿ ಹಾಗು ಸ್ಥಳೀಯರ ಮಧ್ಯೆ ವಿವಾದವನ್ನು ಇತ್ಯರ್ಥ ಪಡಿಸಲು ಹಲವಾರು ಮಾತುಕತೆಗಳು ನಡೆದಿದ್ದರು ಅವುಗಳು ಫಲಪ್ರದವಾಗಿರಲಿಲ್ಲ. ಆದರೆ ಇಂದು ಶಾಸಕ ಹರೀಶ್ ಪೂಂಜಾ ಮುತುವರ್ಜಿಯಿಂದ ಗ್ರಾಮದ ದೇವಸ್ಥಾನ ಮತ್ತು ದೇವರು ಭಕ್ತರಿಗೆ ಮತ್ತೆ ದೊರೆತಿದೆ ಎಂದು ಸ್ಥಳೀಯರಾದ ಮಂಜುನಾಥ್ ಸಾಲ್ಯಾನ್ ಹರ್ಷ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವಿದ್ದ 25 ಸೆಂಟ್ಸ್ ಭೂಮಿಯ ಜೊತೆಗೆ ಮತ್ತೆ 70 ಸೆಂಟ್ಸ್ ಭೂಮಿಯನ್ನು ಖರೀದಿಸಲಾಗಿದ್ದು, ಸ್ಥಳದಲ್ಲಿ ಶೀಘ್ರವೇ ಗೋಪಾಲಕೃಷ್ಣ ದೇವಸ್ಥಾನ ತಲೆ ಎತ್ತಲಿದೆ ಎನ್ನುತ್ತಾರೆ ಮಂಜುನಾಥ್ ಸಾಲ್ಯಾನ್.