Connect with us

BELTHANGADI

ಅರಣ್ಯ ಇಲಾಖೆ ದಬ್ಬಾಳಿಕೆ ವಿರುದ್ದ ಕೆಂಡಾಮಂಡಲಾರದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ ಅಕ್ಟೋಬರ್ 09 : ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕೆ ಹಾಕಿದ್ದ ತಳಪಾಯವನ್ನು ಕಿತ್ತೆಸೆದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇದೀಗ ಸ್ಥಳೀಯ ಶಾಸಕ ಅರಣ್ಯ ಸಚಿವರ ಜೊತೆ ಮಾತುಕತೆ ನಡೆಸಿದ್ದರೂ ಮತ್ತೆ ಇಂದು ಮನೆ ತೆರವಿಗೆ ಆಗಮಿಸಿ, ತಾತ್ಕಾಲಿಕವಾಗಿ ನಿರ್ಮಾಣವಾಗಿದ್ದ ಶೆಡ್ ಕೆಡವಲು ಮುಂದಾದ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕಿಡಿಕಾರಿದರು.


ಕಳೆಂಜ ಗ್ರಾಮದ ಅಮ್ಮಿಡ್ಕಿ ಕುದ್ದಮನೆ ಸೇಸ ಗೌಡ ಹಾಗೂ ಕುಟುಂಬಸ್ಥರು ಈ ಜಮೀನಿನಲ್ಲಿ ಈ ಹಿಂದಿನಿಂದಲೂ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಜಾಗದಲ್ಲಿ ಇದೀಗ ಅವರ ಕುಟುಂಬಸ್ಥರು ಹೊಸದಾಗಿ ಮನೆ ನಿರ್ಮಿಸಲು ಮುಂದಾಗಿದ್ದರು. ಮನೆ ಪಂಚಾಂಗದ ಕೆಲಸ ಆರಂಭಿಸಿದ್ದರು. ಈ ನಡುವೆ ಕಳೆದ ವಾರ ಅರಣ್ಯ ಇಲಾಖೆಯವರು ಈ ಜಮೀನು 309 ಸರ್ವೇ ನಂಬರ್ ನಲ್ಲಿದ್ದು ಇದು ಅರಣ್ಯ ಇಲಾಖೆಯ ಜಾಗ ಎಂದು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಹರೀಶ್ ಪೂಂಜಾ ಭೇಟಿ ತೆರವು ಕಾರ್ಯಾಚರಣೆಯನ್ನು ತಡೆ ಹಿಡಿದಿದ್ದರು.


ಈ ನಡುವೆ ಅಕ್ಟೋಬರ್ 7 ರಂದು ಶಾಸಕ ಹರೀಶ್‌ ಪೂಂಜ ಅವರು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದ್ದರಲ್ಲದೆ ಅರಣ್ಯ ಸಚಿವರ ಈಶ್ವರ್‌ ಖಂಡ್ರೆ ಅವರಿಗೆ ಸ್ಥಳದಿಂದಲೇ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಕುರಿತು ಮಾಹಿತಿ ಪಡೆದ ಸಚಿವರು ಸಧ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.


ಆದರೆ ಈ ನಡುವೆ ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಬಡಪಾಯಿಗೆ ತಾತ್ಕಾಲಿಕವಾಗಿ ಶಾಸಕರು ನಿರ್ಮಿಸಿಕೊಟ್ಟಿದ್ದ ಮನೆಯನ್ನು ಕೆಡವಲು ಇಂದು ಆಗಮಿಸಿದ್ದಾರೆ. ಈ ಮಾಹಿತಿ ತಿಳಿದ ಶಾಸಕ ಹರಿಶ್ ಪೂಂಜಾ ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮನೆ ತೆರವಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹರೀಶ್ ಪೂಂಜಾ ಕೆಂಡಾಮಂಡಲಾರದರು. ಶಾಸಕ ಹರೀಶ್ ಪೂಂಜಾಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ್ತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಸಾಥ್ ಕೊಟ್ಟರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಕೆ.ಎಸ್.ಆರ್.ಪಿ.ಯ ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *