BELTHANGADI
ಬೆಳ್ತಂಗಡಿ: ಭಜನಾ ಸ್ಪರ್ಧೆ, ₹ 5 ಲಕ್ಷ ಬಹುಮಾನ ಪಡೆದ ನಾಳ ಭಜನಾ ಮಂಡಳಿ ಪ್ರಥಮ
ಬೆಳ್ತಂಗಡಿ, ಮಾರ್ಚ್ 03: ರಾಜ್ಯದಲ್ಲೇ ಅತಿ ಹೆಚ್ಚು ಭಜನಾ ಮಂಡಳಿಗಳು ಬೆಳ್ತಂಗಡಿ ತಾಲ್ಲೂಕಿನಲ್ಲಿವೆ. ಹೀಗಾಗಿ, ಭಜನೆಯ ನಾಡು ಬೆಳ್ತಂಗಡಿ ಎಂದು ಕರೆಯುವಂತಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬುಧವಾರ ವಠಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ, ವೇಣೂರು ಪ್ರಖಂಡ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಆಯೋಜಿಸಿದ ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆಯ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹಿಂದೂ ಸಂಘಟನೆಗೆ ಭಜನಾ ಸಂಘಗಳು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ತಂಡಗಳನ್ನು ಒಟ್ಟುಗೂಡಿಸಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಜನಾ ಮಂದಿರಗಳ ಸ್ವಚ್ಛತೆ, ಅಲಂಕಾರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಈ ರೀತಿಯ ಸ್ಪರ್ಧೆಯ ಮೂಲಕ ಹೊಸ ಆಯಾಮ ಕಲ್ಪಿಸಿ ಮಾದರಿಯಾದ ಕಾರ್ಯಕ್ರಮವನ್ನು ನಡೆಸಲಾಯಿತು’ ಎಂದರು.
ಸಮಾರೋಪ ಸಮಾರಂಭಕ್ಕೆ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ರಾವ್ ಚಾಲನೆ ನೀಡಿದರು. ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ, ವಿಹಿಂಪ ಮಂಗಳೂರು ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ಸಂಯೋಜಕ ಮಂಜುನಾಥ ಶೆಟ್ಟಿ ಕಲ್ಮಂಜ ಇದ್ದರು.
ತೀರ್ಪುಗಾರರಾಗಿದ್ದ ರಮೇಶ್ ಕಲ್ಮಾಡಿ ಉಡುಪಿ, ರಾಜೇಶ್ ಪಡಿಯಾರ್ ಮೈಸೂರು ಹಾಗೂ ಉಷಾ ಹೆಬ್ಬಾರ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳ ಸಂಯೋಜಕ ನವೀನ್ ನೆರಿಯಾ ಸ್ವಾಗತಿಸಿದರು. ಹರೀಶ್ ನೆರಿಯಾ ಕಾರ್ಯಕ್ರಮ ನಿರ್ವಹಿಸಿದರು. ತಾಲ್ಲೂಕಿನ 21 ತಂಡಗಳು ಸ್ಪರ್ಧಾ ಸುತ್ತಿಗೆ ಆಯ್ಕೆಯಾಗಿದ್ದವು.
7 ತಂಡಗಳಿಗೆ ₹ 12.50 ಲಕ್ಷ ಬಹುಮಾನ: ಬೆಳ್ತಂಗಡಿ ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆಯಲ್ಲಿ ನಾಳ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪ್ರಥಮ ಸ್ಥಾನದೊಂದಿಗೆ ₹ 5 ಲಕ್ಷ ಬಹುಮಾನ ಪಡೆದುಕೊಂಡಿದೆ. ಕಲ್ಮಂಜ ನಿಡಿಗಲ್‌ನ ಸತ್ಯನಾರಾಯಣ ಭಜನಾ ಮಂದಿರಕ್ಕೆ ₹ 2.50 ಲಕ್ಷ, ತೃತೀಯ ಬಹುಮಾನ ಪಡೆದ ಮಿತ್ತಬಾಗಿಲು ಪಂಚಶ್ರೀ ಭಜನಾ ಮಂಡಳಿ, ಮುಂಡಾಜೆ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಹೊಸಂಗಡಿ ಪಡ್ಡಂದಡ್ಕದ ಮಂಜುನಾಥೇಶ್ವರ ಭಜನಾ ಮಂಡಳಿ, ಧರ್ಮಸ್ಥಳ ಮುಳಿಕ್ಕಾರ್ ಚಾಮುಂಡೆಶ್ವರಿ ಭಜನಾ ಮಂಡಳಿ, ಧರ್ಮಸ್ಥಳ ಜೋಡುಸ್ಥಾನ ನಿತ್ಯ ನೂತನ ಭಜನಾ ಮಂಡಳಿಗಳು ತಲಾ ₹ 1 ಲಕ್ಷ ಬಹುಮಾನ ಪಡೆದುಕೊಂಡಿವೆ.