BELTHANGADI
40 ಕೋಟಿ ವಂಚನೆ – ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್ ಸೊಸೈಟಿ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ ಮೇ 24: ಗ್ರಾಹಕರು ಠೇವಣಿ ಇಟ್ಟಿದ್ದ 40 ಕೋಟಿ ಹಣ ವಾಪಾಸ್ ನೀಡದೆ ವಂಚನೆ ಮಾಡಿದ ಆರೋಪದ ಮೇಲೆ ಶ್ರೀ ರಾಮ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಳ್ತಂಗಡಿ ನಗರದ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್. ನಾಯಕ್ ಕಾಂಪೌಂಡ್‌ನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಕಳೆದ ವರ್ಷ ಗ್ರಾಹಕರು ಒಟ್ಟಾಗಿ ಸೇರಿ ದಾಖಲೆಗಳನ್ನು ತೆಗೆದು ಡಿಸಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲ ಕಡೆ ದೂರು ನೀಡಿದ್ದರು. ಈ ಬಗ್ಗೆ ಡಿಸಿ ಕಚೇರಿಯಿಂದ ಎಸ್ಪಿಗೆ ದೂರನ್ನು ರವಾನೆ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಮಂದಿ ನೊಂದ ಗ್ರಾಹಕರು ಗುರುವಾರ ಸೊಸೈಟಿಯ 14 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ.
ವಂಚನೆಗೊಳಗಾದವರಲ್ಲಿ ಕೇವಲ 13 ಮಂದಿ ಮಾತ್ರ ದೂರು ನೀಡಿದ್ದು, ಸುಮಾರು 200ಕ್ಕೂ ಮಿಕ್ಕಿ ಗ್ರಾಹಕರಿಗೆ ಈ ಸೊಸೈಟಿಯಿಂದ ವಂಚನೆಯಾಗಿದ್ದರೂ ಹೆಚ್ಚಿನವರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರುದಾರ ದಯಾನಂದ ನಾಯಕ್ ತಿಳಿಸಿದ್ದಾರೆ