BELTHANGADI
ಖಾಸಗಿ ಜಾಗದಲ್ಲಿ ಸರಕಾರಿ ಕಟ್ಟಡ ಪ್ರಕರಣ….ವೈಯುಕ್ತಿಕ ದ್ವೇಷ ಸಾಧನೆಗೆ ಕಾರಣವಾಯ್ತಾ ವಿವಾದ….?

ಬೆಳ್ತಂಗಡಿ ಜೂನ್ 06: ಗ್ರಾಮಪಂಚಾಯತ್ ಸದಸ್ಯೆಯೋರ್ವರ ಸ್ವಂತ ಜಾಗದಲ್ಲಿ ಪಂಚಾಯತ್ ಕಟ್ಟಡ ನಿರ್ಮಿಸಿ ಪ್ರಕರಣ ಇದೀಗ ವೈಯುಕ್ತಿಕ ದ್ವೇಷದ ಸಾಧನವಾಗಿ ಬದಲಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮಪಂಚಾಯತ್ ಆಡಳಿತ ವರ್ಗ ಅದೇ ಪಂಚಾಯತ್ ನ ಸದಸ್ಯೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಯಮುನಾ ಎಂಬವರ ಸ್ವಂತ ಜಾಗದಲ್ಲಿ ಗ್ರಾಮಪಂಚಾಯತ್ ಕಟ್ಟಡ ಕಟ್ಟಿದ ಆರೋಪವಿದೆ. ಈ ನಡುವೆ ತನ್ನ ಸ್ವಂತ ಜಾಗದಲ್ಲಿ ಕಟ್ಟಿದ ಕಟ್ಟಡದಲ್ಲಿ ಯಮುನಾ ನಾಯ್ಕ ಮತ್ತು ಆಕೆಯ ಕುಟುಂಬ ಕಳೆದ ಎರಡು ವರ್ಷಗಳಿಂದ ಗೃಹಪ್ರವೇಶ ಮಾಡಿದ್ದರು. ಈ ವಿಚಾರ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ನಡುವೆ ಜಯಂತಿ ನಾಯ್ಕ ಇತ್ತೀಚೆಗೆ ಚುನಾವಣೆಯಲ್ಲಿ ಎರಡನೇ ಬಾರಿಗೆ ಜಯಗಳಿಸಿದ ಶಾಸಕ ಹರೀಶ್ ಪೂಂಜಾ ಗೆ ಶುಭಕೋರುವ ಬ್ಯಾನರ್ ಒಂದನ್ನು ಕಟ್ಟಡದಲ್ಲಿ ಅಳವಡಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತೆಕ್ಕಾರು ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್ ಪಂಚಾಯತ್ ಪಿಡಿಒ ಗೆ ಆ ಬ್ಯಾನರ್ ಅನ್ನು ತೆರವುಗೊಳಿಸಲು ಸೂಚಿಸಿದ್ದಾರೆ.

ಅಧ್ಯಕ್ಷರ ಆದೇಶದ ಮೇರೆಗೆ ಪಿಡಿಒ ಸುಮಯ್ಯ ಅಹಮ್ಮದ್ ಯಮುನಾ ನಾಯ್ಕ ಮನೆಗೆ ತೆರಳಿ ಒತ್ತಾಯಪೂರ್ವಕವಾಗಿ ಆಕೆಯಿಂದ ಕಾಗದವೊಂದಕ್ಕೆ ಸಹಿಹಾಕಿಸಿ ತಂದಿದ್ದರು ಎನ್ನುವ ಆರೋಪವಿದೆ. ತಮ್ಮ ಸ್ವಂತ ಜಾಗವನ್ನು ಅನಕ್ಷರಸ್ಥೆಯಾದ ತಾಯಿಯ ಸಹಿ ಪಡೆದು ತಮಗೆ ವಂಚಿಸಲಾಗಿದೆ ಎಂದು ಯಮುನಾ ನಾಯ್ಕ ರ ಮಗ ನವೀನ್ ನಾಯ್ಕ, ತಾಯಿ ಜೊತೆಗೆ ಪಂಚಾಯತ್ ಗೆ ತೆರಳಿ ತಾಯಿ ಸಹಿ ಮಾಡಿದ ಕಾಗದ ಪತ್ರವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಪಂಚಾಯತ್ ಪಿಡಿಒ ಸುಮಯ್ಯ ಅಹಮ್ಮದ್ ಎನ್ನುವ ಮಹಿಳೆ ಯಮುನಾ ನಾಯ್ಕ ಆಕೆಯ ಮಗ ನವೀನ್ ನಾಯ್ಕ ಸೇರಿದಂತೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ್ ಸಾಲ್ಯಾನ್ ವಿರುದ್ಧ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಸರಕಾರಿ ಸೊತ್ತುಗಳಿಗೆ ಹಾನಿ,ಮತ್ತು ತನ್ನ ಮೇಲೆ ಮಾನಭಂಗಕ್ಕೆ ಯತ್ನ ಪ್ರಕರಣವನ್ನು ಪಿಡಿಒ ಸುಮಯ್ಯ ಆರೋಪಿಗಳ ಮೇಲೆ ಹೂಡಿದ್ದಾರೆ.
ಕಾಗದದಲ್ಲಿ ಸಹಿ ಹಾಕಲು ಮನೆಗೆ ಆಗಮಿಸಿದ ಸಂದರ್ಭ ಪಿಡಿಒ ಮತ್ತು ಪಂಚಾಯತ್ ಸಿಬ್ಬಂದಿಗಳು ತನ್ನ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಯಮುನಾ ನಾಯ್ಕ ಕೂಡಾ ಬೆಳ್ತಂಗಡಿ ಪೋಲೀಸ್ ಠಾಸೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಸುಮಾರು ಮೂರ್ನಾಲ್ಕು ವರ್ಷದಿಂದ ತೆಕ್ಕಾರು ಗ್ರಾಮಪಂಚಾಯತ್ ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಸುಮಯ್ಯ ಅಹಮ್ಮದ್ ಲಕ್ಷಾಂತರ ವೆಚ್ಚ ಮಾಡಿ ಸರಕಾರದ ಹಣದಲ್ಲಿ ಕಟ್ಟಿದ ಕಟ್ಟಡದ ವಿವಾದಕ್ಕೆ ಸರಿಯಾದ ದಾಖಲೆ ಸಲ್ಲಿಸಿ ಸರಕಾರದ ಆಸ್ತಿಯನ್ನು ವಾಪಾಸು ಪಡೆಯುವ ಕೆಲಸವನ್ನು ಮಾಡುವುದನ್ನು ಬಿಟ್ಟು ಪಂಚಾಯತ್ ನ ಆಡಳಿತ ವರ್ಗದ ಜೊತೆ ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೇಳಿ ಬಂದಿದೆ.