LATEST NEWS
ಬಿಜೈ – ಕಾರು ಹರಿಸಿ ಬೈಕ್ ಸವಾರನ ಕೊಲೆ ಮಾಡಲು ಹೋಗಿ ಅಮಾಯಕ ಪಾದಚಾರಿಗೆ ಮಹಿಳೆಗೆ ಡಿಕ್ಕಿ ಹೊಡೆದ ಕಾರು – ಆರೋಪಿ ಅರೆಸ್ಟ್

ಮಂಗಳೂರು ಮಾರ್ಚ್ 14: ಹಳೆಯ ದ್ವೇಷಕ್ಕೆ ಬೈಕ್ ಸವಾರನನ್ನು ಕಾರು ಹರಿಸಿ ಕೊಲೆ ಮಾಡಲು ಹೋಗಿ ವ್ಯಕ್ತಿಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಘಟನೆ ನಗರದ ಬಿಜೈ ಕಾಪಿಕಾಡಿನಲ್ಲಿ ನಡೆದಿದೆ. ಕೃತ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಎಸ್ಸೆನ್ನೆಲ್ ಉದ್ಯೋಗಿ ಸತೀಶ್ ಕುಮಾರ್ ಮತ್ತು ಮುರಳಿ ಪ್ರಸಾದ್ ಎಂಬವರು ಅಕ್ಕಪಕ್ಕದ ನಿವಾಸಿಗಳಾಗಿದ್ದು ಯಾವುದೋ ವಿಚಾರಕ್ಕೆ ಜಗಳ ಉಂಟಾಗಿತ್ತು. ಆನಂತರ, ಎಲ್ಲಿ ಸಿಕ್ಕರೂ ಬೈದುಕೊಂಡು ಸಾಗುತ್ತಿದ್ದರು. ಆರೋಪಿ ಸತೀಶ್ ಕುಮಾರ್ ನಮ್ಮ ಜೊತೆ ಮೊದಲಿನಿಂದಲೂ ಜಗಳವಾಡಿಕೊಂಡಿದ್ದ. ಅನೇಕ ಸಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿಂದೊಮ್ಮೆ ನನ್ನ ತಂದೆಯವರು ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಬೈಕ್ ತಾಗಿಸಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಈ ಬಗ್ಗೆ ಉರ್ವ ಠಾಣೆಯಲ್ಲಿ 2023ರಲ್ಲಿ ದೂರು ದಾಖಲಾಗಿತ್ತು ಎಂದೂ ಮುರಳಿ ಪ್ರಸಾದ್ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಇದೇ ಕೋಪದಲ್ಲಿ ಬೈಕಿನಲ್ಲಿ ಮನೆಯತ್ತ ಬರುತ್ತಿದ್ದ ಮುರಳಿಯನ್ನು ಕೊಲ್ಲುವ ಉದ್ದೇಶದಿಂದ ಸತೀಶ್ ಕುಮಾರ್ ತನ್ನ 800 ಕಾರಿನಲ್ಲಿ ಹಿಂಬದಿಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು , ಬಿಜೈ ಆರನೇ ಕ್ರಾಸ್ ನಲ್ಲಿ ಬೈಕ್ ಸವಾರ ಮುಂದಿನಿಂದ ಹೋಗುತ್ತಿದ್ದಾಗ ಅತಿ ವೇಗದಿಂದ ಬಂದ ಕಾರು ಬೈಕಿಗೆ ಡಿಕ್ಕಿಪಡಿಸಿದ್ದಲ್ಲದೆ, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಬೈಕ್ ಸವಾರ ಮುರುಳಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರೆ, ಮಹಿಳೆ ಕಾಂಪೌಂಡ್ ಗೋಡೆಯ ಮೇಲಕ್ಕೆ ಎಸೆಯಲ್ಪಟ್ಟು, ಅಲ್ಲಿರುವ ಕಬ್ಬಿಣದ ರಾಡ್ ಅವರ ಕಾಲಿಗೆ ಸಿಲುಕಿ ತಲೆ ಕೆಳಗಾಗಿ ಸಿಕ್ಕಿಕೊಂಡಿದ್ದಾರೆ. ಆನಂತರ ಸ್ಥಳೀಯ ನಿವಾಸಿಗಳು ಓಡಿ ಬಂದು ಗೋಡೆಯಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಕೆಳಕ್ಕಿಳಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಉರ್ವ ಪೊಲೀಸರು ಆರೋಪಿ ಸತೀಶ್ ಕುಮಾರ್ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿದ್ದು ಬಂಧಿಸಿದ್ದಾರೆ. ಆತನ ಕಾರನ್ನೂ ವಶಕ್ಕೆ ಪಡೆದಿದ್ದಾರೆ.