DAKSHINA KANNADA
ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ: ಸುನಿಲ್ ಕುಮಾರ್
ಮಂಗಳೂರು, ಮಾರ್ಚ್ 03: ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಕರಾವಳಿ ಉತ್ಸವ ಮೈದಾನದಲ್ಲಿ ಇದೇ 16ರಂದು ನಡೆಯಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿತ್ತು. ಕುಡಿಯುವ ನೀರಿಗೆ ತೊಂದರೆಯಾಗಲಿಲ್ಲ. ಈ ಬಾರಿ ಮಳೆಗಾಲ ಬೇಗ ಮುಗಿದಿದ್ದು ಈಗ ಬಿಸಿಲಿನ ಝಳ ಹೆಚ್ಚು ಇದೆ. ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಕೆಲಸದ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಮಸ್ಯೆ ಉಂಟಾಗಬಲ್ಲ ಸ್ಥಳಗಳು ಇದ್ದರೆ ಈಗಲೇ ಗುರುತಿಸಿ ಪರಿಹಾರಕ್ಕೆ ದಾರಿ ಕಂಡುಕೊಳ್ಳಬೇಕು. ಈ ಕುರಿತು ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಸುನಿಲ್ ಕುಮಾರ್ ಹೇಳಿದರು.
ಬಾವಿಯಲ್ಲಿ ಅಥವಾ ಇತರ ಜಲಮೂಲಗಳಲ್ಲಿ ನೀರು ಇಲ್ಲದಿದ್ದರೆ ಏನೂ ಮಾಡಲಾಗದು. ಆದರೆ ನಳ ಸಂಪರ್ಕ ಇರುವ ಕಡೆಗಳಲ್ಲಿ ನೀರಿನ ಅಭಾವ ಇದ್ದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಆಡಳಿತದ ಲೋಪದಿಂದಾಗಿ ನೀರು ಸಿಗುತ್ತಿಲ್ಲ ಎಂಬ ದೂರು ಬರಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಫಲಾನುಭವಿಗಳ ಸಮಾವೇಶಕ್ಕೆ ಕೆಲವೇ ದಿನ ಉಳಿದಿದೆ. ಯಾವುದೇ ಲೋಪ ಆಗದಂತೆ ಕಾರ್ಯಕ್ರಮ ಆಯೋಜಿಸಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಮಾತನಾಡಿ ಯೋಜನೆಗಳ ಪ್ರಯೋಜನ ಪಡೆಯಲಾಗದ ಫಲಾನುಭವಿಗಳು ಇದ್ದಲ್ಲಿ ಹುಡುಕಿ ಪಟ್ಟಿ ಮಾಡುವಂತೆ ಮುಖ್ಯಮಂತ್ರಿ ಅವರು ಸೂಚಿಸಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಿಂದ ಬಂದಿರುವ ಹೆಸರುಗಳನ್ನು ಗುರುತಿಸಿ ಫಲಾನುಭವಿಗಳ ಹೆಸರಿನಲ್ಲಿ ವಿವೇಕಾನಂದ ಸ್ವಸಹಾಯ ಸಂಘಗಳ ಮೂಲಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಸಂಘಗಳಿಗೆ ಮೂಲನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್, ತಾವು ಪ್ರತಿನಿಧಿಸುವ ಮಂಗಳೂರು ದಕ್ಷಿಣ ಕ್ಷೇತ್ರದಲ್ಲೇ 84 ಸಾವಿರ ಫಲಾನುಭವಿಗಳು ಇದ್ದಾರೆ. ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಮಂದಿ ಇರಬಹುದು. ಅವರನ್ನೆಲ್ಲ ಗುರುತಿಸಿ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದರು. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಮಹಾನಗರಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ.ಎ, ಉಪಮೇಯರ್ ಪೂರ್ಣಿಮಾ ಇದ್ದರು.