LATEST NEWS
ಉತ್ತರ ಪ್ರದೇಶ – ಟ್ರಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ 18 ಮಂದಿ ಸಾವು

ಉತ್ತರ ಪ್ರದೇಶ ಜುಲೈ 28: ಟ್ರಕ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ 18 ಮಂದಿ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ರಾಮ್‍ಸ್ನೇಹಿಘಾಟ್ ಪೊಲೀಸ್ ಠಾಣೆ ಬಳಿ ಲಖನೌ-ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಂಗಳವಾರ ಮತ್ತು ಬುಧವಾರದ ನಡುವಿನ ಮಧ್ಯರಾತ್ರಿ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ಅಯೋಧ್ಯೆ ಗಡಿಯ ಕಲ್ಯಾಣಿ ನದಿ ಸೇತುವೆಯಲ್ಲಿ 1 ಗಂಟೆಯ ವೇಳೆಗೆ ಬಸ್ಸಿನ ಆ್ಯಕ್ಸಿಲ್ ತುಂಡಾಗಿ ಬಸ್ಸು ಕೆಟ್ಟು ನಿಂತಿತ್ತು. ಚಾಲಕ ಹಾಗೂ ಆಪರೇಟರ್, ಬಸ್ಸನ್ನು ಬದಿಯಲ್ಲಿ ನಿಲ್ಲಿಸಿ ದುರಸ್ತಿ ಮಾಡುತ್ತಿದ್ದರು. ಏತನ್ಮಧ್ಯೆ ಲಕ್ನೋ ಕಡೆಯಿಂದ ವೇಗವಾಗಿ ಬಂದ ಟ್ರಕ್ಕೊಂದು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಬಸ್ಸು ದುರಸ್ತಿ ಮಾಡುವ ವೇಳೆ ರಸ್ತೆ ಬದಿಯಲ್ಲಿ ನಿದ್ರಿಸುತ್ತಿದ್ದ 18 ಮಂದಿ ಕೂಲಿಕಾರ್ಮಿಕರು ಮೃತಪಟ್ಟಿದ್ದು, ಇತರ 19 ಮಂದಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನಡಿ ಹಲವಾರು ಮಂದಿ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿರುವುದಾಗಿ ಲಖನೌ ವಲಯ ಎಡಿಜಿ ನಾರಾಯಣ್ ಸಬತ್ ಮಾಹಿತಿ ನೀಡಿದ್ದಾರೆ.
ಬಸ್ ಹರಿಯಾಣದಿಂದ ಬಿಹಾರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಯವರು ಮೃತರ ಕುಟುಂಬಗಳಿಗೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.