LATEST NEWS
ಬಪ್ಪನಾಡು ರಥ ಮುರಿದು ಬಿದ್ದ ಪ್ರಕರಣ – ಒಂದೇ ಒಂದು ಜೀವಕ್ಕೆ ಗಾಯ ಆಗದಂತೆ ತಡೆದಿದ್ದೇನೆ – ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ ದೈವದ ಎಚ್ಚರಿಕೆ

ಮಂಗಳೂರು, ಏಪ್ರಿಲ್ 27: ಬಪ್ಪನಾಡು ವಾರ್ಷಿಕ ಜಾತ್ರೋತ್ಸವದ ವೇಳೆ ಬ್ರಹ್ಮರಥ ಮುರಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ದೈವ ಎಚ್ಚರಿಕೆ ನೀಡಿದ್ದು, ಆ ದಿನ ಯಾವುದೇ ಜೀವಕ್ಕೆ ಅಪಾಯವಾಗದಂತೆ ತಡೆದಿದ್ದೇನೆ, ಆದರೆ ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ ಎದುರಾಗಲಿದೆ ಎಂದು ದೈವ ಎಚ್ಚರಿಕೆ ನೀಡಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಅವಘಡದ ಬಗ್ಗೆ ಸದ್ಯ ಜಾರಂದಾಯ ಮತ್ತು ಬಂಟ ದೈವಗಳಿಂದ ತಂತ್ರಿಗಳ ಎದುರಲ್ಲೇ ಆಕ್ರೋಶ ಹೊರಹಾಕಿವೆ. ಜಾತ್ರೋತ್ಸವದ ಬಳಿಕ ನಡೆದ ನೇಮೋತ್ಸವದ ವೇಳೆ ದೈವ ಆಕ್ರೋಶ ಹೊರಹಾಕಿದ್ದು, ಬಂಟ ದೈವದ ರೋಷಾವೇಶ ಕಂಡು ಭಕ್ತರು ಬೆಚ್ಚಿ ಬಿದಿದ್ದಾರೆ. ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲ ನಾನು. ಎಷ್ಟು ಜೀವಕ್ಕೆ ಹಾನಿ ಆಗುತ್ತಿತ್ತು? ಮುಂದಕ್ಕೆ ಎಲ್ಲವನ್ನೂ ಸರಿ ಮಾಡುತ್ತೇನೆ. ತುಂಬಾ ವಿಷಯಗಳು ಇದೆ. ನನಗಿರುವ ಅಧಿಕಾರ ಬೇರೆ ಯಾವ ದೈವಕ್ಕೂ ಇಲ್ಲ. ಪ್ರಶ್ನಾಚಿಂತನೆ ಹಾಕಲೇಬೇಕಾಗಿದೆ. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ ಎಂದು ದೈವ ನುಡಿದಿದೆ.

ಪುನಃ ಬ್ರಹ್ಮಕಲಶ ಆಗಿ ಹೊಸ ಬ್ರಹ್ಮ ರಥೋತ್ಸವದಲ್ಲಿ ರಥೋತ್ಸವ ಆಗಲಿ. ಆ ಸಂದರ್ಭದಲ್ಲಿ ಯಾರು ತಡೆಯುತ್ತಾರೆಂದು ನಾನು ನೋಡುತ್ತೇನೆ. ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂಬ ಲೆಕ್ಕಾಚಾರ ನನಗೆ ಬಿಡಿ. ಈಗ ಒಳ್ಳೆ ರೀತಿಯಲ್ಲಿ ವಾಪಾಸು ಹೋಗುತ್ತೇನೆ. ದುರ್ಗಾಪರಮೇಶ್ವರಿಯ ಕಣ್ಣೀರು ಒರೆಸಿ ಕೂರಿಸಿದ್ದೇನೆ. ಅವರು ದುಃಖದಲ್ಲಿದ್ದರು ಹೋಗಿ ಅವರ ಪಾದ ಹಿಡಿಯುತ್ತೇನೆ. ಮುಂದಿನ ಭವಿಷ್ಯವನ್ನು ಒಳ್ಳೆದು ಮಾಡುತ್ತೇನೆ. ಯಾರಿಗೂ ಏನು ತೊಂದರೆಯಾಗಲ್ಲ ಎಂಬ ಭಾಷೆಯನ್ನು ಅವರಿಗೆ ನೀಡುತ್ತೇನೆ ಎಂದು ದೈವ ನುಡಿದಿದೆ.
ಬಲಿ ಮೂರ್ತಿಗೆ, ಅರ್ಚಕರಿಗೆ, ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿ ರಕ್ಷಣೆ ನೀಡಿ ಕಾಪಾಡಿದ್ದೇನೆ. ಇಲ್ಲಿನ ಹೆಸರನ್ನು ಕಾಪಾಡಿದ್ದೇನೆ. ದೊಡ್ಡ ಗಂಡಾಂತರ ಏನಾದರೂ ಆಗಿದ್ದರೆ ಅಜಗಜಾಂತರವಾಗುತ್ತಿತ್ತು. ಪ್ರಾಣ, ಮಾನಕ್ಕೆ ಏನು ಹಾನಿಯಾಗೋದಕ್ಕೆ ಬಿಟ್ಟಿಲ್ಲ ನಾನು. ಮುಂದಕ್ಕೆ ಏನು ನಡಿಬೇಕು ಅದನ್ನು ಚಂದದಲ್ಲಿ ಮಾಡಿಸಿಕೊಡುತ್ತೇನೆ. ಯಾರಿಂದ ಏನು ತಪ್ಪಾಗಿದೆ ಎಂದು ಮುಂದಕ್ಕೆ ಹೇಳುತ್ತೇನೆ. ಈಗ ಎಷ್ಟು ಬೇಕಾದರೂ ಮುಚ್ಚಿಡಲಿ. ನನ್ನ ಗ್ರಾಮದ ಯುವಕರು ನನ್ನ ಜೊತೆಗಿರಲಿ ಎಂದು ತಿಳಿಸಿದೆ.