BANTWAL
ಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಹಾಕಿದ್ದ ತೊಲೆ ಮಾಯ..!
ಬಂಟ್ವಾಳ : ನೂರಾರು ವರ್ಷಗಳ ಪುರಾತನ ಬ್ರಿಟಿಷ್ ಕಾಲದ ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಘನ ಗಾತ್ರದ ವಾಹನಗಳ ಸಂಚಾರ ನಿಷೇಧ ಹೇರಲಾಗಿ ಹಾಕಲಾಗಿದ್ದ ಕಬ್ಬಿಣದ ಕಂಬಗಳು ಒಂದೇ ದಿನದಲ್ಲಿ ಮಾಯವಾಗಿದೆ.
ಮತ್ತೆ ಇದೀಗ ಮೊದಲಿನಂತೆ ಘನಗಾತ್ರದ ವಾಹನಗಳ ಸಂಚಾರ ನಿರಾಳವಾಗಿ ಸಂಚಾರ ಮಾಡುತ್ತಿರುವುದು ಕಂಡುಬಂದಿದೆ. ಕೆಲ ದಿನಗಳ ಹಿಂದೆ ಸೇತುವೆಯ ಮಧ್ಯ ಭಾಗದಲ್ಲಿ ಸಣ್ಣ ಬಿರುಕೊಂದು ಕಂಡು ಬಂದ ವಿಡಿಯೋ ಸಕತ್ ವೈರಲ್ ಆಗಿತ್ತು. ಜೊತೆಗೆ ಆಯುಷ್ಯ ಮುಗಿದ ಸೇತುವೆಯಲ್ಲಿ ಘನ ವಾಹನಗಳು ಸಂಚಾರ ಮಾಡದಂತೆ ಎಚ್ಚರಿಕೆಯ ವಿಡಿಯೋ ಹರಿಯಬಿಡಲಾಗಿತ್ತು. ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ ಸೇತುವೆಯ ಎರಡು ಭಾಗದಲ್ಲಿ ಕಬ್ಬಿಣದ ಕಂಬಗಳನ್ನು ಹೂತುಹಾಕಿ ಅದರ ಮೇಲೆ ಅಡ್ಡಲಾಗಿ ಕಬ್ಬಿಣದ ರಾಡ್ ನ್ನು ಘನವಾಹನಗಳು ಸಂಚಾರ ಮಾಡದಂತೆ ತಡೆಯಲು ಹಾಕಲಾಗಿತ್ತು. ಆದರೆ ಈ ಸೇತುವೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ಮಾಡುವುದು ನಿಷೇಧ ಹೇರಲಾಗಿದೆ ಎಂಬ ನಾಮ ಫಲಕವನ್ನು ಇಲಾಖೆ ಹಾಕದ ಕಾರಣದಿಂದಾಗಿ ಸೇತುವೆಯ ಆರಂಭದಲ್ಲಿ ಹಾಕಲಾಗಿದ್ದ ತಡೆಯನ್ನು ಲಾರಿಯೊಂದು ಎಳೆದು ತುಂಡು ಮಾಡಿತ್ತು. ಅದೃಷ್ಟವಶಾತ್ ದ್ವಿ ಚಕ್ರವಾಹನ ಸಹಿತ ಇತರ ಸಣ್ಣ ವಾಹನಗಳು ಅ ಸಂದರ್ಭದಲ್ಲಿ ಇಲ್ಲದ ಕಾರಣ ಅಪಾಯ ತಪ್ಪಿತ್ತು. ಇದೀಗ ಒಂದು ಭಾಗದ ಕಂಬಗಳು ಮಾಯವಾಗಿದೆ. ವೆಲ್ಡಿಂಗ್ ಮೆಷಿನ್ ಮೂಲಕ ಕಂಬಗಳನ್ನು ತುಂಡು ಮಾಡಿ ಕೊಂಡು ಹೋಗಿರುವುದಕ್ಕೆ ಸ್ಥಳದಲ್ಲಿ ಸಾಕ್ಷಿಗಳು ಇವೆ. ಇನ್ನೊಂದು ಭಾಗದ ಕಂಬಗಳು ಹಾಗೆಯೇ ಉಳಿದಿವೆ ಆದರೆ ಅಡ್ಡಲಾಗಿ ಹಾಕಲಾಗಿದ್ದ ರಾಡ್ ಕಾಣುತ್ತಿಲ್ಲ. ಕೇವಲ ಒಂದು ದಿನಕ್ಕೆ ಮಾತ್ರ ಮೀಸಲಾದ ಕಂಬಗಳು ಯಾರ ಮನೆಗೆ ಹೋಗಿವೆ ಎಂಬುದು ಗೊತ್ತಿಲ್ಲ. ಅಕ್ರಮವಾಗಿ ರಾತ್ರಿ ವೇಳೆ ಸೇತುವೆಯ ಅಡಿ ಭಾಗದಲ್ಲಿ ನಡೆಯುವ ಮರಳುಗಾರಿಕೆಯ ಮರಳನ್ನು ಸಾಗಿಸುವ ದೃಷ್ಟಿಯಿಂದ ಪಾಣೆಮಂಗಳೂರು ಹಳೆಯ ಸೇತುವೆ ಅಗತ್ಯವಾಗಿ ಬೇಕು .ಹಾಗಾಗಿ ಸೇತುವೆಗೆ ಅಡ್ಡಲಾಗಿ ಹಾಕಲಾಗಿದ್ದ ರಾಡ್ ನ್ನು ಮರಳು ದರೋಡೆ ಕೋರರು ತೆಗೆಯುವ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.