BANTWAL
ಬಂಟ್ವಾಳ: ಜಾಗೃತ ಹಿಂದೂ ಸಮಾಜೋತ್ಸವಕ್ಕೆ ಕೇಸರಿಮಯವಾದ ಪೇಟೆ, ಶಾಂತಿಯುತವಾಗಿ ಸಮಾಜೋತ್ಸವಕ್ಕೆ ಬಿಗಿ ಖಾಕಿ ಭದ್ರತೆ..!

ಅಕ್ಟೋಬರ್ 8 ರಂದು ಆದಿತ್ಯ ವಾರ ದಕ್ಷಿಣ ಕನ್ನಡದ ಬಂಟ್ವಾಳ ಬಿ.ಸಿ.ರೋಡಿನಲ್ಲಿ ನಡೆಯಲಿರುವ ಜಾಗೃತ ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಪೇಟೆ ಸಂಪೂರ್ಣ ಕೇಸರಿಮಯವಾಗಿ ಕಂಗೋಳಿಸುತ್ತಿದೆ.
ಬಂಟ್ವಾಳ : ಅಕ್ಟೋಬರ್ 8 ರಂದು ಆದಿತ್ಯ ವಾರ ದಕ್ಷಿಣ ಕನ್ನಡದ ಬಂಟ್ವಾಳ ಬಿ.ಸಿ.ರೋಡಿನಲ್ಲಿ ನಡೆಯಲಿರುವ ಜಾಗೃತ ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಪೇಟೆ ಸಂಪೂರ್ಣ ಕೇಸರಿಮಯವಾಗಿ ಕಂಗೋಳಿಸುತ್ತಿದೆ.

ವಿಶ್ವ ಹಿಂದೂ ಪರಿಷತ್ – ಬಜರಂಗ ದಳ ಬಂಟ್ವಾಳ ವತಿಯಿಂದ ಅ. 8ರಂದು ಸಂಜೆ 4.30 ಕ್ಕೆ ಬಿ.ಸಿ.ರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ.
ಸಮಾವೇಶ ನಡೆಯಲಿರುವ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿದೆ. ಜೊತೆಗೆ ನೂರಾರು ಕಾರ್ಯಕರ್ತರು ಪೇಟೆಯಲ್ಲಿ ಕೇಸರಿ ದ್ವಜ ಹಾಗೂ ಬಟ್ಟಿಂಗ್ಸ್ ಗಳನ್ನು ಹಾಕಿ ಇಡೀ ಪೇಟೆ ಕಂಗೊಳಿಸುವ ರೀತಿಯಲ್ಲಿ ಶೃಂಗಾರ ಮಾಡಿದ್ದಾರೆ.
ಸಮಾವೇಶದಲ್ಲಿ ಸಾವಿರಾರು ಹಿಂದೂ ಸಮಾಜದ ಬಂಧುಗಳು ಭಾಗವಹಿಸುವ ಸಲುವಾಗಿ ಪೇಟೆಯಲ್ಲಿ ಅಲಂಕಾರ ಮಾಡಿದ್ದು ಆಕರ್ಷಣೀಯವಾಗಿದೆ.
ಹಲವು ವರ್ಷಗಳ ಬಳಿಕ ಬಿಸಿರೋಡಿನಲ್ಲಿ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ.
ಹಾಗಾಗಿ ಸಂಘಪರಿವಾರ ಹಾಗೂ ಪರಿವಾರ ಸಂಘಟನೆಗಳು ಮತ್ತು ಬಿಜೆಪಿ ಜೊತೆಯಾಗಿ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಯಶಸ್ವಿ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಿದ್ದಾರೆ.
ಶೌರ್ಯ ಜಾಗರಣ ರಥಯಾತ್ರೆಯ ಭಾಗವಾಗಿ ಈ ಸಮಾಜೋತ್ಸವ ನಡೆಯಲಿದ್ದು, ಚಿತ್ರದುರ್ಗದಿಂದ ಹೊರಟಿರುವ ರಥಯಾತ್ರೆ ಅ. 8ರಂದು ಬಂಟ್ವಾಳ ತಾಲೂಕಿಗೆ ಆಗಮಿಸಲಿದೆ.
ಯಾತ್ರೆಯನ್ನು ಮಾಣಿಯಲ್ಲಿ ಸ್ವಾಗತಿಸಿ ಬಳಿಕ ಮಧ್ಯಾಹ್ನ ೩ಕ್ಕೆ ಬಿ.ಸಿ.ರೋಡಿನ ಕೈಕಂಬದಿಂದ ಸಮಾಜೋತ್ಸವ ಮೈದಾನಕ್ಕೆ ಸಾವಿರಾರು ಕಾರ್ಯಕರ್ತರ ಮೆರವಣಿಗೆ ನಡೆಯಲಿದೆ. ಬಂಟ್ವಾಳ, ಕಲ್ಲಡ್ಕ ಮತ್ತು ವಿಟ್ಲ ಮೂರು ಪ್ರಖಂಡಗಳು ಜತೆಯಾಗಿ ಸಮಾಜೋತ್ಸವ ಆಯೋಜಿಸಿದ್ದು, ಪ್ರತಿ ಗ್ರಾಮದಲ್ಲಿ ಬೈಠಕ್ ನಡೆಸಲಾಗಿದೆ.
ಸುಮಾರು 50 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.
ಸಮಾಜೋತ್ಸವದಲ್ಲಿ ಸಾಧ್ವಿ ದೇವಿ ಸರಸ್ವತಿ ಜೀ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ, ವಿಹಿಂಪ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ| ಎಂ.ಬಿ.ಪುರಾಣಿಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಭಾಗವಹಿಸಲಿದ್ದಾರೆ.
ಪೋಲೀಸ್ ಬಂದೋಬಸ್ತ್
ಸಮಾಜೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗ್ ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸಂಘಟಕರಿಗೆ ಸೂಚನೆ ನೀಡಲಾಗಿದೆ ಎಂದು ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ತಿಳಿಸಿದ್ದಾರೆ.
ಶಾಂತಿಯುತವಾಗಿ ಸಮಾಜೋತ್ಸವ ಕಾರ್ಯಕ್ರಮ ನಡೆಸುವ ಹಾಗೂ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದ್ದು,ಬಂಟ್ವಾಳ,ವಿಟ್ಲ,ಗ್ರಾಮಾಂತರ ಪೋಲೀಸರಲ್ಲದೆ ಹೆಚ್ಚುವರಿಯಾಗಿ ಪೋಲೀಸರನ್ನು ಕರೆಸಿಕೊಳ್ಳಲಾಗುತ್ತದೆ.
ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ನೇತ್ರತ್ವದಲ್ಲಿ ವಿವಿಧ ಕಡೆಯ ಪೋಲೀಸರ ತಂಡ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.