Connect with us

    BANTWAL

    ಐತಿಹಾಸಿಕ ಪ್ರದೇಶದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ – ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    ಬಂಟ್ವಾಳ ಸೆಪ್ಟೆಂಬರ್ 7: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಮತ್ತು ಪೆರುವಾಯಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಕೋಟೆತ್ತಡ್ಕ ಎಂಬ ಬೆಟ್ಟ ಪ್ರದೇಶದಲ್ಲಿ ನಿರಂತರವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹಲವು ಬಾರಿ ಕಲ್ಲು ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ತೆರಳಿ ಗಣಿಗಾರಿಕೆಯನ್ನು ನಿಲ್ಲಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.

    ಗಣಿಗಾರಿಕೆ ನಿಲ್ಲಿಸುವಂತೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಲಿಖಿತ ದೂರು ನೀಡಿದರೂ ಪ್ರಭಾವಿ ಜನಪ್ರತಿನಿಧಿಗಳ ಬೆಂಬಲದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಸ್ತುತ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಐತಿಹಾಸಿಕ ಹಿನ್ನಲೆಯುಳ್ಳದ್ದಾಗಿದ್ದು, ಪಾಂಡವರ ಕೋಟೆ ಎಂದು ಗುರುತಿಸಲ್ಪಟ್ಟಿದೆ. ಅಲ್ಲದೆ ಅತೀ ಎತ್ತರ ಪ್ರದೇಶವಾಗಿದ್ದು, ಕಲ್ಲು ಗಣಿಗಾರಿಕೆ ನಡೆಸಿದ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟಿರುವ ಹಿನ್ನಲೆಯಲ್ಲಿ ಗುಂಡಿಗಳಲ್ಲಿ ಮಳೆ ನೀರು ತುಂಬಿದೆ. ಗುಂಡಿಗಳಲ್ಲಿ ನೀರು ಹೆಚ್ಚಾದಂತೆ ತಗ್ಗು ಪ್ರದೇಶದಲ್ಲಿರುವ ಜನ ವಸತಿ ಪ್ರದೇಶಗಳಿಗೆ ಹರಿದು ಕೊಡಗಿನಲ್ಲಿ ಸಂಭವಿಸಿದಂತಹ ಅನಾಹುತವೂ ಈ ಭಾಗದಲ್ಲಿ ಸಂಭವಿಸಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಕಲ್ಲಡ್ಕದಿಂದ ಕಾಸರಗೋಡು ಸಂಪರ್ಕಿಸುವ ರಸ್ತೆಯ ಕುದ್ದುಪದವಿನಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಈ ಅಕ್ರಮ ಚಟುವಟಿಕೆಗಳು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಗೇರು ನಿಗಮ, ಗೋಮಾಳ ಹೀಗೆ ಸುಮಾರು 25 ಎಕರೆ ಸರಕಾರಿ ಭೂಮಿಯಲ್ಲಿ ಈ ಕಲ್ಲು ದಂಧೆ ನಡೆಯುತ್ತಿದೆ. ಭಾರೀ ಗಾತ್ರದ ಲಾರಿಗಳಲ್ಲಿ ಕೆಂಪು ಕಲ್ಲಿನ ಜೊತೆಗೆ ಇದೀಗ ಮಣ್ಣನ್ನೂ ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ.

    ಹೆಚ್ಚಾಗಿ ಆಂದ್ರಪ್ರದೇಶಕ್ಕೆ ಕೆಂಪು ಮಣ್ಣು ನಿರಂತರವಾಗಿ ಸಾಗಾಟವಾಗುತ್ತಿದ್ದು, ಸ್ಥಳೀಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದೆ. ಅಲ್ಲದೆ ಮಣ್ಣು ಸಾಗಾಟದಿಂದಾಗಿ ರಸ್ತೆಗಳೂ ಧೂಳುಮಯವಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಈ ಧೂಳು ತಿಂದೇ ಬದುಕಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿದೆ ಎಂದು ಗಣಿಗಾರಿಕೆಯಿಂದ ಬೇಸತ್ತ ಸ್ಥಳೀಯ ನಿವಾಸಿ ರಾಜೇಶ್ ಮಣಿಯಾಣಿ ಆರೋಪಿಸುತ್ತಾರೆ. ಸ್ಥಳೀಯರು ಈಗಾಗಲೇ ಈ ಅಕ್ರಮ ದಂಧೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಸರಕಾರ ಹಾಗೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *