LATEST NEWS
ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದಡಿ ಕಣ್ಣೀರಿಟ್ಟ ಬನ್ನಂಜೆ ರಾಜಾ
ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದಡಿ ಕಣ್ಣೀರಿಟ್ಟ ಬನ್ನಂಜೆ ರಾಜಾ
ಉಡುಪಿ ಅಗಸ್ಟ್ 27: ಭೂಗತ ಪಾತಕಿ ಬನ್ನಂಜೆ ರಾಜಾ ಅವರ ತಾಯಿ ವಿಲಾಸಿನಿ ಅವರ ಅಂತ್ಯ ಸಂಸ್ಕಾರ ಇಂದು ನೆರವೇರಿಸಲಾಯಿತು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ಇಂದು ಉಡುಪಿಗೆ ಆಗಮಿಸಿ ತಾಯಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿದರು.
ಉಡುಪಿಯ ಕಲ್ಮಾಡಿಯಲ್ಲಿರುವ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಬನ್ನಂಜೆ ರಾಜಾ ಅವರ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ತಾಯಿಯ ಅಂತ್ಯಸಂಸ್ಕಾರಕ್ಕೆ ಬನ್ನಂಜೆ ರಾಜಾ ನನ್ನು ಕರೆತರಲು ಬನ್ನಂಜೆ ರಾಜಾ ಕುಟುಂಬಸ್ಥರು ಉಡುಪಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಬನ್ನಂಜೆ ರಾಜನನ್ನು ಒಂದು ದಿನದ ಮಟ್ಟಿಗೆ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಪರವಾನಿಗೆ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು.
ಈ ಹಿನ್ನಲೆಯಲ್ಲಿ ಬನ್ನಂಜೆ ರಾಜ ಕಳೆದ ರಾತ್ರಿ ಉಡುಪಿ ನಗರ ಠಾಣೆಗೆ ಬಂದಿದ್ದನು. ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಲ್ಮಾಡಿಯ ಮನೆಗೆ ಕರೆತರಲಾಗಿದ್ದು, ಮನೆಯಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡ ಬನ್ನಂಜೆ ರಾಜ ಅಂತಿಮ ಯಾತ್ರೆಯ ಚಟ್ಟಕ್ಕೆ ಹೆಗಲು ಕೊಟ್ಟಿದ್ದಾನೆ.
ಅಲ್ಲಿಂದ ಮಲ್ಪೆಯ ಹಿಂದೂ ರುದ್ರಭೂಮಿಗೆ ಬನ್ನಂಜೆ ರಾಜನನ್ನು ಕರೆದುಕೊಂಡು ಹೋಗಿದ್ದು, ರುದ್ರಭೂಮಿಯಲ್ಲಿ ಸುಮಾರು ಒಂದು ಗಂಟೆಗಳ ಪ್ರಕ್ರಿಯೆಗಳು ನಡೆದಿದೆ. ಹಿರಿಯರ ಅಪ್ಪಣೆಯಂತೆ ಎಲ್ಲಾ ಪ್ರಕ್ರಿಯೆಯನ್ನು ಬನ್ನಂಜೆ ರಾಜ ಮಾಡಿದ್ದಾನೆ.
ಭೂಗತ ಪಾತಕಿಯಾಗಿ ಸುಮಾರು 25 ವರ್ಷಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದ ಬನ್ನಂಜೆ ರಾಜಾ, 2015 ರಲ್ಲಿ ಮೊರೊಕ್ಕಾದಲ್ಲಿ ಪೊಲೀಸರಿಗೆ ಶರಣಾಗಿದ್ದ, 2015ರ ಆಗಸ್ಟ್ 15ರಂದು ಉಡುಪಿಗೆ ಕರೆತರಲಾಗಿತ್ತು. 10ಕ್ಕೂ ಹೆಚ್ಚು ಪ್ರಕರಣಗಳು ಸದ್ಯ ಬನ್ನಂಜೆ ರಾಜನ ಮೇಲಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ.
ಸುಮಾರು 25 ವರ್ಷಗಳಿಂದ ಕುಟುಂಬದ ಸಂಪರ್ಕದಿಂದ ದೂರವಾಗಿದ್ದ ಬನ್ನಂಜೆ ರಾಜನಿಗೆ ಅಮ್ಮನ ಅನಾರೋಗ್ಯ ಬಹಳ ಕಾಡುತ್ತಿದ್ದಂತೆ. ಅಮ್ಮನ ಕೊನೆಯ ದಿನಗಳಲ್ಲಿ ಅವರ ಜೊತೆಗೆ ಇರಬೇಕು ಅಂತ ಅವನ ಮನಸ್ಸು ಹಂಬಲಿಸಿ ಪೊಲೀಸರಿಗೆ ಶರಣಾಗಿದ್ದ ಎಂದು ಹೇಳಲಾಗಿದೆ.
ತಾಯಿಯ ಅನಾರೋಗ್ಯದ ಸಂದರ್ಭ ಮನೆಗೆ ಬಂದಿದ್ದ ಬನ್ನಂಜೆ, ಎರಡನೇ ಭೇಟಿಯ ಸಂದರ್ಭ ತಾಯಿ ಇಲ್ಲವಾಗಿದ್ದಾರೆ. ಅಂತ್ಯ ಸಂಸ್ಥಾರದ ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದ ಕೆಳಗೆ ತಲೆಯಿಟ್ಟು ಕೆಲಕಾಲ ಕಣ್ಣೀರಿಟ್ಟಿದ್ದಾನೆ. ಬನ್ನಂಜೆ ರಾಜಾ, ತಂದೆ ಮತ್ತು ಅಣ್ಣನ ಜೊತೆಗೆ ತಾಯಿಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ್ದಾನೆ. ಪ್ರಕ್ರಿಯೆಗಳೆಲ್ಲಾ ಮುಗಿಯುವ ತನಕ ಸ್ಮಶಾನದಲ್ಲಿರಲು ಅವಕಾಶ ನೀಡಿದ ಪೊಲೀಸರು ಮತ್ತೆ ನಗರ ಠಾಣೆಗೆ ಕರೆದೊಯ್ದಿದ್ದಾರೆ.