KARNATAKA
ಬೆಂಗಳೂರಿಗೂ ಬರಲಿದೆ ಝೂಮ್ ಆ್ಯಪ್ ಕಚೇರಿ
ಬೆಂಗಳೂರು, ಜುಲೈ 22 : ಅಮೆರಿಕ ಮೂಲದ ಜೂಮ್ ವಿಡಿಯೋ ಕಮ್ಯುನಿಕೇಶನ್ಸ್ ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯಲಿದೆ. ಜೂಮ್ ವಿಶ್ವ ದರ್ಜೆಯ ಏಕೀಕೃತ ಕಮ್ಯುನಿಕೇಶನ್ಸ್ ಸೇವೆಯನ್ನು ಒದಗಿಸುತ್ತಿದ್ದು ಬೆಂಗಳೂರಿನಲ್ಲಿ ಹೊಸ ಕೇಂದ್ರವನ್ನು ತೆರೆಯಲಿದೆ ಎಂದು ಕಂಪನಿಯ ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಶಂಕರಲಿಗಮ್ ತಿಳಿಸಿದ್ದಾರೆ.
ಝೂಮ್ ಈಗಾಗಲೇ ಮುಂಬೈನಲ್ಲಿ ಕಚೇರಿ ಹೊಂದಿದ್ದು ಮುಂಬೈ ಮತ್ತು ಹೈದರಾಬಾದ್ ನಲ್ಲಿ ಎರಡು ಡೇಟಾ ಸೆಂಟರ್ ಗಳನ್ನೂ ಸಂಸ್ಥೆ ಹೊಂದಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಆಧರಿತ ಕಂಪೆನಿಗಳು ಹೆಚ್ಚಿರುವುದರಿಂದ ಸಂಸ್ಥೆಯ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಸದ್ಯದಲ್ಲೇ ಇದಕ್ಕಾಗಿ ಟೆಕ್ಕಿಗಳನ್ನು ಹಾಗೂ ಅಗತ್ಯ ಸಿಬಂದಿಯನ್ನು ನೇಮಕ ಮಾಡಲಾಗುವುದು ಎಂದು ಝೂಮ್ ಸಂಸ್ಥೆ ಹೇಳಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಸಂವಹನಕ್ಕಾಗಿ ಝೂಮ್ ಏ್ಯಪ್ ಬಳಕೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಖಾಸಗಿ ಕಂಪನಿಗಳು ಸಮೂಹ ಸಂವಹನಕ್ಕೆ ಜೂಮ್ ಏ್ಯಪ್ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಶೈಕ್ಷಣಿಕ ವ್ಯವಸ್ಥೆಯಲ್ಲೂ ಜೂಮ್ ಬಳಕೆ ಹೆಚ್ಚಿದ್ದರಿಂದ ಈ ಆ್ಯಪ್ ಬಳಕೆ ಮಿತಿಮೀರಿತ್ತು. 2020ರ ಜನವರಿಯಿಂದ ಎಪ್ರಿಲ್ ವರೆಗಿನ ಅವಧಿಯಲ್ಲಿ ಶೇಕಡಾ 6700 ರಷ್ಟು ಜೂಮ್ ಬಳಕೆ ಹೆಚ್ಚಿದ್ದನ್ನು ಸಂಸ್ಥೆ ಉಲ್ಲೇಖ ಮಾಡಿದೆ.