KARNATAKA
ಹೆಚ್ಚುತ್ತಿರುವ ಸೋಂಕು ; ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್
ಬೆಂಗಳೂರು, ಜೂನ್ 21 : ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಾಂಕ್ರಾಮಿಕ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್ ಪ್ರದೇಶಗಳಲ್ಲಿ ಮತ್ತೆ ಲಾಕ್ ಡೌನ್ ಹೇರಲಾಗಿದೆ.
ಕೆ.ಆರ್ ಮಾರುಕಟ್ಟೆ, ಚಿಕ್ಕಪೇಟೆ, ಚಾಮರಾಜಪೇಟೆ ಹಾಗೂ ಕಲಾಸಿಪಾಳ್ಯ ಪ್ರದೇಶಗಳಲ್ಲಿ ನಾಳೆಯಿಂದಲೇ ಲಾಕ್ ಡೌನ್ ಜಾರಿಗೆ ಬರಲಿದೆ. ಲಾಕ್ ಡೌನ್ ನಿಯಮಾವಳಿಯನ್ನು ಉಲ್ಲಂಘಿಸುವ ಅವಕಾಶವನ್ನೇ ಈ ಬಾರಿ ನೀಡಿಲ್ಲ. ಲಾಕ್ ಡೌನ್ ಇರುವ ಪ್ರದೇಶಗಳಲ್ಲಿ ನಿತ್ಯ ಬಳಕೆ ವಸ್ತುಗಳನ್ನು ತರಲು ಜನ ಬರಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಅಂಥವರ ವಿರುದ್ದ ಕ್ರಿಮಿನಲ್ ಕೇಸ್ ಜಡಿಯಲು ಪೊಲೀಸರಿಗೆ ಸೂಚಿಸಲಾಗಿದೆ.
ಇದರ ಜೊತೆಗೆ ಸೋಂಕು ಹೆಚ್ಚುತ್ತಿರುವ ಸಿದ್ದಾಪುರ, ವಿವಿ ಪುರ, ಕಲಾಸಿಪಾಳ್ಯ, ವಿದ್ಯಾರಣ್ಯಪುರ ಹಾಗೂ ಧರ್ಮರಾಯ ದೇವಸ್ಥಾನ ವಾರ್ಡ್ ಪ್ರದೇಶಗಳಲ್ಲಿ ಸೀಲ್ಡೌನ್ ಮಾಡಲಾಗುತ್ತಿದೆ. ಸೋಂಕಿಗೆ ಕಾರಣವಾಗುವ ಪ್ರದೇಶಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ಸೇವೆಗಳನ್ನು ಬಿಟ್ಟರೆ ಉಳಿದೆಲ್ಲಕ್ಕೂ ನಿರ್ಬಂಧ ಹೇರಲಾಗಿದೆ. ಸೋಂಕು ಹರಡಲು ಕಾರಣವಾಗುವ ನಗರದ ಕೆಲವು ಮಾರುಕಟ್ಟೆಗಳನ್ನು ಅನಿರ್ಧಿಷ್ಟಾವಧಿಗೆ ಬಂದ್ ಮಾಡುವ ನಿರ್ಧಾರಕ್ಕೂ ಬಿಬಿಎಂಪಿ ಬಂದಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು ಅಧಿಕಾರಿಗಳಿಗೆ ಮೂಲ ಪತ್ತೆ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಪಾಸಿಟಿವ್ ಬಂದ ಏರಿಯಾಗಳಲ್ಲೂ ಮತ್ತೆ ಲಾಕ್ ಡೌನ್ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.