KARNATAKA
ಬೆಂಗಳೂರು: ₹7 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ವಿದೇಶಿ ಪ್ರಜೆ ಸೇರಿ 10 ಮಂದಿ ಬಂಧನ

ಬೆಂಗಳೂರು, ಏಪ್ರಿಲ್ 16: ನಗರದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತ, ಬೇಗೂರು ಹಾಗೂ ಯಲಹಂಕ ನ್ಯೂ ಟೌನ್ನಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ₹7 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು, ಪೇಯಿಂಗ್ ಗೆಸ್ಟ್ ನಿವಾಸಿಗಳು ಹಾಗೂ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಮೇರೆಗೆ ಸಾಫ್ಟ್ವೇರ್ ಎಂಜಿನಿಯರ್, ವಿದೇಶಿ ಪೆಡ್ಲರ್ಗಳೂ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದ ಡಿ ಮಾರ್ಟ್ ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ಸಾಫ್ಟ್ವೇರ್ ಎಂಜಿನಿಯರ್ ಜಿಜೊ ಪ್ರಸಾದ್(25) ಎಂಬಾತನನ್ನು ಬಂಧಿಸಲಾಗಿದೆ. ಈತನ ಸ್ನೇಹಿತ ಪರಾರಿ ಆಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಯಿಂದ 3 ಕೆ.ಜಿ 554 ಗ್ರಾಂ. ಹೈಡ್ರೊಫೋನಿಕ್ ಗಾಂಜಾ, ₹26 ಲಕ್ಷ ನಗದು, ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹4.52 ಕೋಟಿಯೆಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಬಂಧಿಸಲಾಯಿತು. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ. ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಬೊಮ್ಮಸಂದ್ರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದ ಆರೋಪಿ, ಕೇರಳದಲ್ಲಿ ಹೈಡ್ರೊಫೋನಿಕ್ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ, ನಗರಕ್ಕೆ ತರುತ್ತಿದ್ದ. ನಗರದಲ್ಲಿ ಸ್ನೇಹಿತನೊಂದಿಗೆ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಸೇರಿ ಹಲವು ಕಡೆಗಳಲ್ಲಿ ಮಾರುತ್ತಿದ್ದ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
ಒಂದು ಗ್ರಾಂಗೆ ₹12 ಸಾವಿರ: ‘ಯಾರಿಗೂ ಅನುಮಾನ ಬಾರದಂತೆ ಎರಡು ಪದರದ ಪ್ಲಾಸ್ಟಿಕ್ ಕವರ್ನಲ್ಲಿ ತಲಾ 10 ಗ್ರಾಂ.ನಂತೆ ಡ್ರಗ್ಸ್ನ ಪೊಟ್ಟಣ ಮಾಡಿ, ಬ್ಯಾಗ್ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿತ್ತು. ಒಂದು ಗ್ರಾಂಗೆ ₹12 ಸಾವಿರ ಪಡೆಯುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
₹2 ಕೋಟಿ ಮೌಲ್ಯದ ವಸ್ತು ಜಪ್ತಿ: ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಪ್ರಜೆ ಕ್ರಿಸ್ಟಿನ್ ಸೊಪುರುಚುಕ್ವು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಒಂದು ಕೆ.ಜಿ ಎಂಡಿಎಂಎ ಕ್ರಿಸ್ಟಲ್, ಮೊಬೈಲ್, ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹2 ಕೋಟಿ ಎಂದು ಅಂದಾಜಿಸಲಾಗಿದೆ.
2012ರಲ್ಲಿ ವಾಣಿಜ್ಯ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ಮೋಜಿನ ಜೀವನಕ್ಕಾಗಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ. ಒಂದು ಗ್ರಾಂ. ಡ್ರಗ್ಸ್ ಅನ್ನು ₹20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಆರೋಪಿಯು ನಕಲಿ ದಾಖಲೆ ಸೃಷ್ಟಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕೇಂದ್ರಕ್ಕೆ(ಎಫ್ಆರ್ಆರ್ಒ) ಪತ್ರ ಬರೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟೂರು ಲೇಔಟ್ನಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳದ ಎಂಟು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 110 ಗ್ರಾಂ. ಎಂಡಿಎಂಎ ಕ್ರಿಸ್ಟಲ್ 10 ಮೊಬೈಲ್ ಫೋನ್ ಒಂದು ಟ್ಯಾಬ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹27 ಲಕ್ಷ ಎಂದು ಅಂದಾಜಿಸಲಾಗಿದೆ. ಕೇರಳದಿಂದ ಬಂದು ಲಾಡ್ಜ್ನಲ್ಲಿ ವಾಸ್ತವ್ಯ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ಹೇಳಿದರು. ‘ಆರೋಪಿಗಳು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಮೋಜಿನ ಜೀವನ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದಿಸಲು ಬೆಂಗಳೂರಿನಲ್ಲಿ ನೆಲಸಿರುವ ವಿದೇಶಿ ಡ್ರಗ್ಸ್ ಪೆಡ್ಲರ್ಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳು ಐ.ಟಿ-ಬಿ.ಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂ. ಡ್ರಗ್ಸ್ಗೆ ₹ 15ರಿಂದ ₹20 ಸಾವಿರ ತೆಗೆದುಕೊಳ್ಳುತ್ತಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.