ಮೈಸೂರು ಅಗಸ್ಟ್ 12: ಕಾಡಾನೆಯ ಎದುರು ಸೆಲ್ಪಿ ತೆಗೆದುಕೊಳ್ಳುಲು ಹೋಗಿ ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೇ ಬಚಾವ್ ಆದ ವ್ಯಕ್ತಿಯನ್ನು ಪೊಲೀಸರು ಹುಡುಕಿ ಆತನ ಅರೆಸ್ಟ್ ಮಾಡಿ ಅವನ ಮೇಲೆ 25 ಸಾವಿರ ರೂಪಾಯಿ ದಂಡ ಹಾಕಿದೆ.

ಬಂಧಿತನನ್ನು ನಂಜನಗೂಡಿನ ನಿವಾಸಿ ಬಸವರಾಜ್ ಎಂದು ಗುರುತಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಗಾಯಗೊಂಡು ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25,000 ರೂ ದಂಡ ವಿಧಿಸಿ ಮಾತ್ರವಲ್ಲದೆ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.

ತಿಳುವಳಿಕೆ ಕೊರತೆಯಿಂದ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಈ ಕುರಿತು ಆರೋಪಿ ಬಸವರಾಜು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಬಂಡೀಪುರ ಬಂಕಾಪುರ ದೇವಸ್ಥಾನಕ್ಕೆ ತೆರಳಿ ಮರಳುವಾಗ ಹೆದ್ದಾರಿಯಲ್ಲಿ ಆನೆ ಕಂಡು ಮೋಜು ಮಸ್ತಿಗಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿಗೆ ಸಿಲುಕಿ ಬದುಕಿದ್ದೇ ಹೆಚ್ಚು ಅನಿಸಿದೆ. ಇಂತಹ ದುಸ್ಸಾಹಸವನ್ನು ಯಾರೂ ಮಾಡಬೇಡಿ, ಅರಣ್ಯದೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ಶೌಚಕ್ಕೆ ಹೋಗುವುದು, ಪ್ರಾಣಿಗಳಿಗೆ ಆಹಾರ ನೀಡುವುದನ್ನು ಮಾಡಬೇಡಿ ಎಂದು ಆರೋಪಿ ಬಸವರಾಜ್ ವಿಡಿಯೊದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಕೆಕ್ಕನಹಳ್ಳ ಪ್ರದೇಶದ ಬಳಿ ಕಾಡಾನೆ ವಾಹನ ಅಡ್ಡಗಟ್ಟಿ ತರಕಾರಿ ತಿನ್ನುತ್ತಿದ್ದಾಗ ತಮಿಳುನಾಡಿನ ಮಧು ಮಲೈಯಿಂದ ಬಂಡೀಪುರದ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಪ್ರವಾಸಿಗ ಬಸವರಾಜು ಆನೆ ಛಾಯಾಚಿತ್ರ ತೆಗೆಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಕಾಡಾನೆ ಆತನ ಮೇಲೆ ದಾಳಿಗೆ ಮುಂದಾಗಿದೆ. ಘಟನೆಯಲ್ಲಿ ಬಸವರಾಜು ಕಾಡಾನೆ ತುಳಿತದಿಂದ ಬಚಾವ್ ಆಗಿದ್ದು, ರಸ್ತೆಯಲ್ಲಿ ಬಿದ್ದ ರಭಸಕ್ಕೆ ಕಾಲು, ಕೈ ಹಾಗೂ ಮುಖಕ್ಕೆ ತರಚಿದ ಗಾಯಗಳಾಗಿದೆ. ನಂತರ ಸಹಪಾಠಿಗಳು ಆತನನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಸಣ್ಣಪುಟ್ಟ ಗಾಯವಾದ ಹಿನ್ನೆಲೆ ನಂಜನಗೂಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.