ಇರಾನ್ / ಬಳ್ಳಾರಿ, ಮಾರ್ಚ್ 1 : ದುಬೈಗೆ ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ 50 ಪ್ರವಾಸಿಗರು ಇರಾನ್- ಅಮೆರಿಕಾ ಇಸ್ರೇಲ್ ವಾರ್ ನಿಂದಾಗಿ ದುಬೈನಲ್ಲೇ ಲಾಕ್ ಆಗಿದ್ದಾರೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ವೈಮಾನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ದುಬೈನಿಂದ ಭಾರತಕ್ಕೆ ಬರಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದರ ಪರಿಣಾಮ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿಯ 50 ಜನ ಅಲ್ಲೇ ಸಿಲುಕಿಕೊಂಡಿದ್ದಾರೆ.

ಯುದ್ಧ ಹಿನ್ನೆಲೆ ವಿಮಾನ ಹಾರಾಟ ವ್ಯತ್ಯಯದಿಂದಾಗಿ ಸದ್ಯ 50 ಪ್ರವಾಸಿಗರು ದುಬೈನಲ್ಲೇ ಉಳಿದುಕೊಂಡಿದ್ದಾರೆ. ದುಬೈನಲ್ಲಿ ಸಿಲುಕಿರುವ ಪ್ರವಾಸಿಗರು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ಆತಂಕ ಇಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರ ಜೊತೆ ಪ್ರವಾಸಿಗರು ಹೇಳಿದ್ದಾರೆ.
ಫೆಬ್ರವರಿ 24ರಂದು ಚಿತ್ರದುರ್ಗದ 15 ಮಂದಿ, ಬಳ್ಳಾರಿಯ 35 ಮಂದಿ ಸೇರಿ 50 ಜನರ ತಂಡ ಐದು ದಿನಗಳ ದುಬೈ ಪ್ರವಾಸಕ್ಕೆಂದು ತೆರಳಿದ್ದರು. ಫೆಬ್ರವರಿ 28ರಂದು ರಾತ್ರಿ 9 ಗಂಟೆಯ ವಿಮಾನದ ಮೂಲಕ ವಾಪಸ್ ಭಾರತಕ್ಕೆ ಬರಬೇಕಿತ್ತು. ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ ಯುದ್ಧ ಆರಂಭವಾಗಿದೆ. 3 ಗಂಟೆಯೊಳಗೆ ಬಂದಿದ್ದರೆ ಏರ್ಪೋರ್ಟ್ ತಲುಪಬಹುದಿತ್ತು. ಆದರೆ ಮೂರು ಗಂಟೆಯ ನಂತರ ಬಂದ ಹಿನ್ನೆಲೆ ಏರ್ಪೋರ್ಟ್ ಸಿಬ್ಬಂದಿ ವಿಮಾನ ನಿಲ್ದಾಣದ ಒಳಗೆ ಬಿಡಲಿಲ್ಲ. ಇದೀಗ ಹಣವೂ ಇಲ್ಲದೇ ಬಳ್ಳಾರಿ ಮೂಲದ ಪ್ರವಾಸಿಗರು ಪರದಾಡುತ್ತಿದ್ದಾರೆ.
ಇತ್ತ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಅವರು ಕೂಡಾ ಸಂಪರ್ಕ ಮಾಡಿದ್ದಾರೆ. ನಾಳೆ ವಿಮಾನ ಹಾರಾಟ ಆರಂಭ ಆಗುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಶಾಸಕರು ನಿರಂತರವಾಗಿ ಸಂಪರ್ಕದಲಿದ್ದು ಪ್ರವಾಸಿಗರನ್ನು ಕ್ಷೇಮವಾಗಿ ವಾಪಸ್ ಕರೆತೆರುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ.