LATEST NEWS
ಅಯೋಧ್ಯೆ ಗರ್ಭಗುಡಿಯ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್

ಅಯೋಧ್ಯೆ, ಜನವರಿ 19 : ಭವ್ಯವಾದ ಶ್ರೀರಾಮಮಂದಿರದ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ (ರಾಮಲಲ್ಲಾ) ನೂತನ ವಿಗ್ರಹವನ್ನು ಗುರುವಾರ ಇರಿಸಲಾಗಿದೆ.
ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಗರ್ಭಗುಡಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಚಿತ್ರ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಬಿಗಿ ಭದ್ರತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು.
ಗುರುವಾರ ಸಂಜೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದ ಬಳಿಕ ಕೃಷ್ಣಶಿಲೆಯಲ್ಲಿ ಮೂಡಿದ 5 ವರ್ಷದ ರಾಮನ 51 ಇಂಚು ಎತ್ತರದ ಬಾಲರಾಮನ ಮೂರ್ತಿಯನ್ನ ಪ್ರತಿಷ್ಠಾಪಿಸಲಾಯಿತು. ಜನವರಿ 22ರಂದು ರಾಮಭಕ್ತರು ಇದರ ರೂಪ ಕಣ್ತುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ. ಅಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಲಿದೆ.