LATEST NEWS
ದನ ಸಾಗಾಟದ ವಾಹನ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿಯ ಸಿಸಿಟಿವಿ ವಿಡಿಯೋ….!!

ಮಂಗಳೂರು ಜೂನ್ 15: ಅಕ್ರಮ ದನ ಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆ ನಡೆದಿದ್ದು ಈ ವೇಳೆ ಕಾರ್ಯಕರ್ತರು ತಲವಾರು ಹಿಡಿದಿದ್ದ ಬಗ್ಗೆ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಘಟನೆ ನಡೆದ ಸ್ಥಳದ ಸಿಸಿಟಿವಿ ವೈರಲ್ ಆಗಿದ್ದು ಮಾರಕಾಸ್ತ್ರಗಳಿಂದ ಟೆಂಪೋದ ಮೇಲೆ ಹಾನಿ ಮಾಡುತ್ತಿರುವುದು ಕಂಡುಬಂದಿದೆ.
ನಿನ್ನೆ ಮುಂಜಾನೆ ಮಂಗಳೂರಿನ ಕೊಟ್ಟಾರ ಬಳಿ ಘಟನೆ ನಡೆದಿತ್ತು. ಈ ಬಗ್ಗೆ ಎಸ್ ಡಿಪಿಐ ಸಂಘ ಪರಿವಾರದ ಗೂಂಡಾಗಳು ದನದ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿತ್ತು. ಮಿನಿ ಟೆಂಪೋದಲ್ಲಿ ನಾಲ್ಕು ಎಮ್ಮೆಗಳನ್ನು ಮಂಗಳೂರಿನ ವಧಾಗೃಹಕ್ಕೆ ಸಾಗಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ತಡೆದಿದ್ದರು.

ಕೊಟ್ಟಾರ ಬಳಿ ವಾಹನ ತಡೆದು ಟೆಂಪೋ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕಾರ್ಯಕರ್ತರು ಈ ವೇಳೆ, ತಲವಾರು ಹಿಡಿದು ಬೆದರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಉರ್ವಾ ಠಾಣೆಯಲ್ಲಿ ಇತ್ತಂಡಗಳಿಂದ ದೂರು ದಾಖಲಾಗಿದೆ.