DAKSHINA KANNADA
ಬಡಗನ್ನೂರು – ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ – 6 ಮಂದಿ ಅರೆಸ್ಟ್
ಪುತ್ತೂರು ಸೆಪ್ಟೆಂಬರ್ 29: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಧೀರ್ ಪೆರುವಾಯಿ, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಪಚ್ಚಂಬಳ ರವಿ, ಕಿರಣ್ ,ವಸಂತ ,ಫಸಲ್, ನಿಝಾರ್ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳು.
ಐವರು ದರೋಡೆಕೋರರ ತಂಡ ಸೆಪ್ಟೆಂಬರ್ 6ರಂದು ತಡರಾತ್ರಿ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿತ್ತು.ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು.
ಪ್ರಕರಣದ ತನಿಖೆಗಾಗಿ ಎಸ್ ಪಿ ಸಿ.ಬಿ ಋಷ್ಯಂತ ವಿಶೇಷ ತಂಡ ರಚಿಸಿದ್ದರು, ಇದೀಗ ಆರು ಮಂದಿ ಆರೋಪಿಗಳ ಬಂಧನವಾಗಿದೆ. ಬಂಧಿತ ಆರೋಪಿಗಳಲ್ಲಿ ಪಚ್ಚಂಬಳ ರವಿ ಪೆರ್ಲದ ತಾಲೂಕು ಪಂಚಾಯತ್ ಅಧ್ಯಕ್ಷ ಜಬ್ಬಾರ್ ಹತ್ಯೆಯ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ. ಇತ್ತೀಚೆಗೆ ಪೆರೋಲ್ ಮೂಲಕ ಜೈಲಿನಿಂದ ಹೊರಗೆ ಬಂದು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಬಂಧಿತ ಆರೋಪಿಗಳಿಂಗ ಕೃತ್ಯಕ್ಕೆ ಬಳಸಿದ ಕಾರು, ಚಿನ್ನ ವಶಕ್ಕೆ ಪಡೆಯಲಾಗಿದೆ.