DAKSHINA KANNADA
ಮೈಮೇಲೆ ದ್ವೆವ್ವದ ಕಾಟ, 3 ತಿಂಗಳಿಂದ ದಿಗ್ಬಂಧನದಲ್ಲಿ ಮಹಿಳೆ ಅಧಿಕಾರಿಗಳಿಂದ ಬಂಧಮುಕ್ತ..!

ಪುತ್ತೂರು: ಮೈಮೇಲೆ ದ್ವೆವ್ವ ಬರುತ್ತೆ ಅಂತ ಕಳೆದ ಮೂರು ತಿಂಗಳಿಂದ ಕೊಠಡಿಯಲ್ಲಿ ಕೂಡಿಹಾಕಿದ ಮಹಿಳೆಯನ್ನು ಅಧಿಕಾರಿಗಳು ಬಂಧಮುಕ್ತಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಕೆಮ್ಮಿಂಜೆ ಗ್ರಾಮದ ಕಾರೆಜ ಎಂಬಲ್ಲಿ ಈ ಘಟನೆ ನಡೆದಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ದಿಗ್ಭಂಧನ ಮುಕ್ತಗೊಳಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೃತ್ತಿಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಸ್ಥಳೀಯ ಶ್ರೀಪತಿ ಹೆಬ್ಬಾರ್ ಎಂಬವರ ಪತ್ನಿ ಆಶಾಲತಾ ಅವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಕಳೆದ 3 ತಿಂಗಳಿನಿಂದ ದಿಗ್ಬಂಧನದಲ್ಲಿರಿಸಲಾಗಿತ್ತು. ಈ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ಬಳಿಕ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ದಿಗ್ಬಂಧನದಿಂದ ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶ್ರೀಪತಿ ಹೆಬ್ಬಾರ್ ಅವರ ಮನೆಯಲ್ಲಿದ್ದ ಅವರ ಸಹೋದರಿಯನ್ನು ಅಧಿಕಾರಿಗಳು ವಿಚಾರಿಸಿದಾಗ ಆಕೆ ಪ್ರೇತ ಮೈಮೇಲೆ ಬರುವ ಕಾರಣಕ್ಕಾಗಿ ದಿಗ್ಭಂಧನದಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೃತ್ತಿಯಲ್ಲು ಅಡುಗೆ ಮಾಡುತ್ತಿದ್ದ ಶ್ರೀಪತಿ ಹೆಬ್ಬಾರ್ ಅವರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ನಿವಾಸಿ ಆಶಾಲತಾರನ್ನು ವಿವಾಹವಾಗಿದ್ದರು. ಅವರಿಗೆ ಈಗ 9 ವರ್ಷ ಪ್ರಾಯದ ಪುತ್ರಿ ಇದ್ದಾಳೆ. ಆಶಾಲತಾ ಅವರ ಮೈಮೇಲೆ ಪ್ರೇತ ಬರುತ್ತದೆ ಎಂಬ ಕಾರಣದ ಹಿನ್ನಲೆಯಲ್ಲಿ ಆಕೆಯನ್ನು ಮನೆಯ ಪಕ್ಕದ ಗೂಡಿನಂತಿರುವ ಕೊಠಡಿಯಲ್ಲಿ ಕೂಡಿ ಹಾಕಿ ದಿನವೊಂದಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಚಹಾ ಮತ್ತು ಬಿಸ್ಕೇಟ್ ಮಾತ್ರ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಈ ರೀತಿ ದಿಗ್ಭಂಧನದಲ್ಲಿರಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು.ಸುದೀರ್ಘ ಅವಧಿಯಲ್ಲಿ ಸ್ನಾನ ಮಾಡಿಸದಿರುವುದರಿಂದ ಸ್ವಚ್ಚತೆಯ ಸಮಸ್ಯೆಯ ಪರಿಣಾಮ ಎದುರಾಗಿತ್ತು ಮಾತ್ರವಲ್ಲದೆ ತೀರಾ ಅಶಕ್ತರಾಗಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ವಿಚಾರಣೆಯ ವೇಳೆ ಲಭಿಸಿದೆ.