DAKSHINA KANNADA
ತಾಯಿಯಿಂದ ದೂರವಾಗಿದ್ದ ಮರಿಯಾನೆ ದುಬಾರೆ ಆನೆ ಶಿಬಿರಕ್ಕೆ

ಸುಳ್ಯ ಎಪ್ರಿಲ್ 16: ಸುಳ್ಯದ ಅಜ್ಜಾವರದಲ್ಲಿ ತಾಯಿಯಿಂದ ದೂರವಾಗಿದ್ದ ಮರಿ ಆನೆಯನ್ನು ತಾಯಿ ಜೊತೆ ಸೇರಿಸಲು ಪ್ರಯತ್ನಪಟ್ಟ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗಿದ್ದು, ಈ ಹಿನ್ನಲೆ ಆನೆ ಮರಿಯನ್ನು ಕೊಡಗಿನ ದುಬಾರೆಯ ಆನೆ ಶಿಬಿರಕ್ಕೆ ಶನಿವಾರ ಸ್ಥಳಾಂತರಿಸಲಾಯಿತು.
ಅಜ್ಜಾವರದ ಸಂತೋಷ್ ಅವರ ತೋಟದಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಬಿದ್ದಿದ್ದ ಎರಡು ಮರಿಯಾನೆಗಳು ಸೇರಿ ನಾಲ್ಕು ಆನೆಗಳನ್ನು ಗುರುವಾರ ರಕ್ಷಣೆ ಮಾಡಿ ಸಮೀಪದ ಕಾಡಿಗೆ ಬಿಡಲಾಗಿತ್ತು. ಅದರಲ್ಲಿ ಮೂರು ತಿಂಗಳ ಮರಿಯಾನೆಯು ಹಿಂಡನ್ನು ಸೇರಿಕೊಳ್ಳದೇ ಅದೇ ದಿನ ಸಂಜೆ ಮತ್ತೆ ಊರಿಗೆ ಮರಳಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯು ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಎರಡು ದಿನಗಳಿಂದ ಅದರ ಆರೈಕೆ ಮಾಡಿದ್ದರು. ಆದರೂ ತಾಯಿ ಆನೆಯು ಮರಿಯನ್ನು ಹುಡುಕಿಕೊಂಡು ಬರಲಿಲ್ಲ.

‘ತಾಯಿ ಆನೆಯು ಬಂದು ಕರೆದೊಯ್ಯಲಿ ಎಂಬ ಕಾರಣಕ್ಕೆ ಮೂರು ದಿನ ಮರಿಯಾನೆಯನ್ನು ಅಲ್ಲೇ ಇಟ್ಟಿದ್ದೆವು. ಆದೆ ತಾಯಿ ಆನೆ ಬರಲೇ ಇಲ್ಲ. ಮರಿಯಾನೆಯನ್ನು ಇನ್ನಷ್ಟು ದಿನ ಅಲ್ಲೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಆರೈಕೆ ಸಲುವಾಗಿ ಅದನ್ನು ದುಬಾರೆಯ ಆನೆ ಶಿಬಿರಕ್ಕೆ ರವಾನಿಸುತ್ತಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.