KARNATAKA
ಸ್ನಾನಕ್ಕಿಟ್ಟ ಬಿಸಿ ನೀರು ಮೈಮೇಲೆ ಬಿದ್ದು 2 ವರ್ಷದ ಮಗು ಧಾರುಣ ಸಾವು

ಮೈಸೂರು ಡಿಸೆಂಬರ್ 14: ಮಗುವಿನ ಸ್ನಾನಕ್ಕೆಂದು ಇಟ್ಟಿದ್ದ ಬಿಸಿ ನೀರು ಮಗುವಿನ ಮೈಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕು ದಾಸನಕೊಪ್ಪಲಿನಲ್ಲಿ ನಡೆದಿದೆ. ಮೃತ ಮಗುವನ್ನು ದಾಸನಕೊಪ್ಪಲು ನಿವಾಸಿ ಪೋಟೋಗ್ರಾಫರ್ ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ಎರಡು ವರ್ಷದ ಆದ್ಯ ಎಂದು ಗುರುತಿಸಲಾಗಿದೆ.
ಮಗುವನ್ನು ಸ್ನಾನ ಮಾಡಿಸಲು ತಾಯಿ ಜಯಲಕ್ಷ್ಮಿ ಬಿಸಿನೀರು ತಂದಿರಿಸಿ ತಣ್ಣೀರು ತರಲು ಹೋದಾಗ ಬಿಸಿನೀರಿನ ಪಾತ್ರೆಯನ್ನು ಆದ್ಯ ತನ್ನ ಮೈಮೇಲೆ ಎಳೆದುಕೊಂಡಿದ್ದು, ಮಗುವಿನ ಚೀರಾಟ ಕೇಳಿ ತಾಯಿ ಬಂದಾಗ ಮಗುವಿನ ಮೇಲೆ ಬೀಸಿ ನೀರು ಬಿದ್ದಿರುವುದು ಗೊತ್ತಾಗಿದೆ. ಮಗುವನ್ನು ತಕ್ಷಣ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
