LATEST NEWS
ಹಟ್ಟಿತೊಳೆದ ನೀರಿನ ಹೊಂಡಕ್ಕೆ ಬಿದ್ದ ಎರಡೂವರೆ ವರ್ಷದ ಮಗು ಸಾವು….!!

ಕುಂದಾಪುರ ಜನವರಿ 05: ಹಟ್ಟಿ ತೊಳೆದ ನೀರಿನ ಹೊಂಡಕ್ಕೆ ಬಿದ್ದ ಎರಡೂವರೆ ವರ್ಷದ ಮಗು ಸಾವನಪ್ಪಿರುವ ಘಟನೆ ಕೋಟ ಠಾಣೆ ವ್ಯಾಪ್ತಿಯ ಮೊಳಹಳ್ಳಿ ಕೈಲೇರಿ ಎಂಬಲ್ಲಿ ನಡೆದಿದೆ.
ಬಿಹಾರ ಮೂಲದ ಬಾದಲ್ ಲಾಲ್ ದಂಪತಿ ಪುತ್ರ ಅನುರಾಜ್ (2) ಮೃತಪಟ್ಟ ಬಾಲಕ. ಕೈಲೇರಿ ಬಳಿ ವಾಸ ಮಾಡುತ್ತಿರುವ ಬಾದಲ್ ಲಾಲ್ ಅವರಿಗೆ ಅನುಷ್ಕಾ (4) ಮತ್ತು ಅನುರಾಜ್ ಎಂಬ ಇಬ್ಬರು ಮಕ್ಕಳಿದ್ದು, ಪತ್ನಿ ಹಟ್ಟಿ ಸ್ವಚ್ಛ ಮಾಡುವ ಕೆಲಸ ಮಾಡಿಕೊಂಡಿದ್ದರು. ಬಾದಲ್ ಪತ್ನಿ ಮಂಗಳವಾರ ಹಟ್ಟಿ ಸ್ವಚ್ಛ ಮಾಡಿ ನೀರು ಹೊಂಡಕ್ಕೆ ಬಿಟ್ಟಿದ್ದರು. ಕಳೆದ ಎರಡು ದಿನದಿಂದ ವಿದ್ಯುತ್ ಇಲ್ಲದೆ ಹೊಂಡದ ನೀರು ಖಾಲಿ ಮಾಡಿರಲಿಲ್ಲ.

ಬಾದಲ್ ಪತ್ನಿ ಎಂದಿನಂತೆ ಹಟ್ಟಿ ಕೆಲಸ ಮಾಡಿ ಸಂಜೆ ಮನೆಗೆ ಮರಳಿದ್ದು, ಮಗನನ್ನು ಕಾಣದಿರುವುದರಿಂದ ತಾನು ಕೆಲಸ ಮಾಡುತ್ತಿದ್ದ ಹಟ್ಟಿ ಹತ್ತಿರ ಬಂದು ಹುಡುಕಿದ್ದಾರೆ. ಹಟ್ಟಿ ತೊಳೆದ ಹೊಂಡದ ಬಳಿ ಮಗುವಿನ ಚಪ್ಪಲಿ ಕಂಡು ಹೊಂಡಕ್ಕೆ ಇಳಿದು ನೋಡಿದಾಗ ಮಗು ಪತ್ತೆಯಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಗು ಅಷ್ಟರಲ್ಲಿ ಮೃತಪಟ್ಟಿತ್ತು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.