DAKSHINA KANNADA
ಬಾಬರಿ ಮಸೀದಿ ದ್ವಂಸ ಹಿನ್ನಲೆ, ದಕ್ಷಿಣಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ.

ಬಾಬರಿ ಮಸೀದಿ ದ್ವಂಸ ಹಿನ್ನಲೆ, ದಕ್ಷಿಣಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ.
ಮಂಗಳೂರು, ಡಿಸೆಂಬರ್ 5: ಬಾಬರಿ ಮಸೀದಿ ದ್ವಂಸ ಘಟನೆಯ ಹಿನ್ನಲೆಯಲ್ಲಿ ಮುಸ್ಲಿಂ ಸಂಘಟನೆಗಳು ಕರಾಳ ದಿನಾಚರಣೆ ಹಾಗೂ ಹಿಂದೂ ಸಂಘಟನೆಗಳು ಶೌರ್ಯ ದಿನಾಚರಣೆಗಳನ್ನು ಆಚರಿಸುವ ಹಿನ್ನಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.
ಪೋಲೀಸ್ ಆಕ್ಟ್ 35 ರನ್ವಯ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ತಾಲೂಕುಗಳಲ್ಲಿ ನಿಶೇಧಾಜ್ಞೆಯನ್ನು ವಿಧಿಸಲಾಗಿದೆ.

ಬಂಟ್ವಾಳದ ಕೈಕಂಬದಲ್ಲಿ ನಾಳೆ ಎಸ್.ಡಿ.ಪಿ.ಐ ವತಿಯಿಂದ ಮೆರವಣಿಗೆ ಹಾಗೂ ಸಭೆ ನಡೆಸಲು ಈಗಾಗಲೇ ಅನುಮತಿಯನ್ನು ಕೋರಲಾಗಿದೆ.
ಅಲ್ಲದೆ ಹಿಂದೂ ಸಂಘಟನೆಗಳು ಬಿ.ಸಿ.ರೋಡ್ ನ ರಕ್ತೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಭೆಯನ್ನು ನಡೆಸಲು ಅನುಮತಿಯನ್ನು ಕೋರಿದೆ.
ಬಂಟ್ವಾಳ ತಾಲೂಕಿನಲ್ಲಿ ಕೋಮು ಸಾಮರಸ್ಯದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಈ ಹಿಂದೆ ಬಂಟ್ವಾಳದ ಅಲ್ಲಲ್ಲಿ ಕೋಮು ಹಿಂಸಾಚಾರ ನಡೆದಿತ್ತು.
ಈ ಹಿನ್ನಲೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಸಸಿಕಾಂತ ಸೆಂಥಿಲ್ ಈ ಆದೇಶವನ್ನು ಹೊರಡಿಸಿದ್ದಾರೆ.
ನಿಷೇಧಾಜ್ಞೆಯ ಹಿನ್ನಲೆಯಲ್ಲಿ ನಾಳೆ ಬೆಳಿಗ್ಗೆ 6 ರಿಂದ ರಾತ್ರಿ 12 ರ ವರೆಗೆ ನಾಲ್ಕು ತಾಲೂಕುಗಳಲ್ಲಿ ಯಾವುದೇ ಮೆರವಣಿಗೆ, ಬಹಿರಂಗ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.
ಸುಳ್ಯ ತಾಲೂಕಿನಲ್ಲೂ ಎಸ್.ಡಿ.ಪಿ.ಐ ಪಕ್ಷ ಕರಾಳ ದಿನಾಚರಣೆಯ ಹಿನ್ನಲೆಯಲ್ಲಿ ಮೆರವಣಿಗೆಯನ್ನು ಹಾಗೂ ಸಭೆ ನಡೆಸಲು ಅನುಮತಿಯನ್ನು ಕೋರಿದೆ.
ಜಿಲ್ಲೆಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಲು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸುಧೀರ್ ರೆಡ್ಡಿ ಈಗಾಗಲೇ ಅಧೀನ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.