LATEST NEWS
ನಾನು 50 ವರ್ಷಗಳಿಂದ ಯೋಗದ ಪರ್ಯಾಯ ಮಾಡುತ್ತಿದ್ದೇನೆ – ಬಾಬಾ ರಾಮ್ ದೇವ್
ಉಡುಪಿ ಅಕ್ಟೋಬರ್ 24: ಯೋಗ ಎನ್ನುವುದು ಮಾಹಿತಿ ಅಲ್ಲ, ಅದನ್ನು ಜಗತ್ತಿನ ಎಲ್ಲರೂ ಜೀವನದಲ್ಲಿ ಅಳವಡಿಕೊಳ್ಳಬೇಕೆಂಬ ಆಕಾಂಕ್ಷೆ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಶೇಕಡ 80 ರಷ್ಟು ಜನರು ಯೋಗ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ ಎಂದು ಎಂದು ಪತಂಜಲಿ ಯೋಗ ಪೀಠ ಹರಿದ್ವಾರದ ಸಂಸ್ಥಾಪಕ ಬಾಬಾ ರಾಮ್‌ದೇವ್ ಹೇಳಿದರು.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ನಡೆದ ಪತಂಜಲಿ ಯೋಗ ಶಿಬಿರವನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳೊಂದಿಗೆ ಉದ್ಘಾಟಿಸಿ ರಾಮ್ ದೇವ್ ಅವರು ಮಾತನಾಡಿದರು. ಸನಾತನ ಧರ್ಮದ ಶಾಶ್ವತ ಸಿದ್ದಾಂತದ ಪ್ರಮುಖ ಭಾಗ ಯೋಗ,ಅದು ನಮ್ಮ ಪೂರ್ವಜರ ವಿರಾಸತ್. ಋಷಿ ಮುನಿಗಳು ನಮಗೆ ನೀಡಿದ ಅಮೂಲ್ಯ ಸಂಪತ್ತು. ಜಗತ್ತಿಗೆ ಯೋಗದ ಮಹತ್ವಿಕೆಯ ಅರಿವಾಗಿದ್ದು, ಕೆಲವೇ ದಿನಗಳಲ್ಲಿ 80% ಜನರು ಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಯೋಗ ಮಾಡದೇ ಹೋದರೆ ಆಗಂತುಕರ ಆಗಮನ ದೇಹದಲ್ಲಿ ಆಗುತ್ತದೆ. ಜೀವನದಲ್ಲಿ ಸಂತುಲನ ಕಾಪಾಡಲು ಯೋಗಾಸನಗಳನ್ನು ಮಾಡುವುದು ಅತೀ ಅಗತ್ಯ. ಇಡೀ ಜಗತ್ತಿನಲ್ಲಿ ಯೋಗ ಪ್ರಸರಣವಾಗಿ ರೋಗ ಮುಕ್ತವಾಗಬೇಕು” ಎಂದರು.
ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಪುತ್ತಿಗೆ ಶ್ರೀಗಳು ಜಗತ್ತಿಗೆ ಗೀತೆಯ ಸಾರ ಹೇಳಿಕೊಟ್ಟು ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ. ವಿಶ್ವಕ್ಕೆ ಆದರ್ಶಪ್ರಾಯವಾದ ಕಾರ್ಯ ಇದು. ಅವರ ಈ ಪರ್ಯಾಯದ ಅವಧಿಯಲ್ಲಿ ಶ್ರೀ ಮಧ್ವಾಚಾರ್ಯರ ಪುಣ್ಯ ಭೂಮಿ ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು, ಪುತ್ತಿಗೆ ಶ್ರೀಪಾದರ ಆಶೀರ್ವಾದ ಪಡೆದು ಯೋಗ ತರಬೇತಿ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ” ಎಂದು ಬಾಬಾ ರಾಮ್ ದೇವ್ ಹೇಳಿದರು. ನನಗೆ ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಹೊಸ ರೀತಿಯ ಅನುಭೂತಿಯಾಯಿತು, ಪತಂಜಲಿ ಯೋಗಪೀಠದ ವತಿಯಿಂದ ಶ್ರೀಪಾದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು 50 ವರ್ಷಗಳಿಂದ ಯೋಗದ ‘ಪರ್ಯಾಯ ಮಾಡುತ್ತಿದ್ದೇನೆ” ಎಂದು ಬಾಬಾ ರಾಮ್ ದೇವ್ ಹೇಳಿದರು.