LATEST NEWS
ಕೊಚ್ಚಿ ಅರಬ್ಬೀ ಸಮುದ್ರದಲ್ಲಿ 3 ಸಾವಿರ ಕೋಟಿ ಬೆಲೆಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ನೌಕಾಪಡೆ
ಕೇರಳ ಎಪ್ರಿಲ್ 19: ಕೇರಳದ ಕೊಚ್ಚಿ ಅರಬ್ಬೀ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಬೆಲೆ ಸುಮಾರು 3 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.
ಕೊಚ್ಚಿಯ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಬಳಸುತ್ತಿದ್ದ ಬೃಹತ್ ದೋಣಿಯಲ್ಲಿ ಮಾದಕ ವಸ್ತುಗಳನ್ನು ವಿದೇಶದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಗಸ್ತು ಕಾರ್ಯದಲ್ಲಿ ಇದ್ದ ನೌಕಾಪಡೆಯ ಹಡಗು ‘ಸುವರ್ಣ’ದ ಸಿಬ್ಬಂದಿ, ಶಂಕಾಸ್ಪದ ಎನಿಸಿದ ದೋಣಿಯನ್ನು ತಪಾಸಣೆ ನಡೆಸಿದಾಗ ಕೃತ್ಯ ಗೊತ್ತಾಗಿದೆ. ತನಿಖೆಯ ಭಾಗವಾಗಿ ಸಿಬ್ಬಂದಿ ದೋಣಿಯನ್ನು ತಪಾಸಣೆಗೆ ಒಳಪಡಿಸಿದರು. ಆಗ ಸುಮಾರು 300 ಕೆ.ಜಿ ಮಾದಕವಸ್ತುಗಳು ಪತ್ತೆಯಾಗಿದೆ. ಪತ್ತೆಯಾಗಿರುವ ಮಾದಕ ವಸ್ತುಗಳ ಬೆಲೆ ಅಂದಾಜು 3 ಸಾವಿರ ಕೋಟಿ ಬೆಲೆ ಎಂದು ಅಂದಾಜಿಸಲಾಗಿದೆ.
ಹಣ ಮತ್ತು ಪ್ರಮಾಣ ಹೊರತಾಗಿ, ಮಾದಕ ವಸ್ತುವಿನ ಕಳ್ಳಸಾಗಣೆಯ ಮಾರ್ಗದ ದೃಷ್ಟಿಯಿಂದ ಇದೊಂದು ದೊಡ್ಡ ಮಟ್ಟದ ದಾಳಿ. ಬಲೂಚಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮಕ್ರನ್ ತೀರ ಭಾಗದಿಂದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.