DAKSHINA KANNADA
ವಂಚನೆ ಪ್ರಕರಣದಲ್ಲಿ 12 ವರ್ಷಗಳ ಬಳಿಕ ನ್ಯಾಯ ಪಡೆದ ಆಟೋ ಚಾಲಕ
ಪುತ್ತೂರು, ಜೂನ್ 14: ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ದಾಖಲಿಸಿದ ಪ್ರಕರಣಕ್ಕೆ ನ್ಯಾಯಾಲಯದಲ್ಲಿ 12 ವರ್ಷಗಳ ಬಳಿಕ ನ್ಯಾಯ ದೊರೆತಿದೆ ಎಂದು ವಂಚನೆ ಆರೋಪ ಎದುರಿಸುತ್ತಿದ್ದ ಚಂದ್ರಶೇಖರ ಕಬಕ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ನೇಹಾಚಾರದಿಂದ ರಮೇಶ್ ಡಿಂಬ್ರಿ ಎಂಬಾತನಿಂದ 12 ವರ್ಷಗಳ ಹಿಂದೆ 20 ಸಾವಿರ ರೂಪಾಯಿಗಳ ಸಾಲ ಪಡೆದಿದ್ದೆ. ಸಾಲವನ್ನು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯಂತೆ 40 ಸಾವಿರ ರೂಪಾಯಿ ಕೊಟ್ಟು ತೀರಿಸಿದ್ದೆ.
ಆದರೂ ಇನ್ನೂ ಹಣ ಕೊಡಬೇಕೆಂದು ರಮೇಶ್ ಡಿಂಗ್ರಿ ತನ್ನ ಮೇಲೆ ಒತ್ತಡ ಹೇರಿದ್ದು, ಬಳಿಕ ಮೊಬೈಲ್ ಕರೆ ಮಾಡಿ ಹಣ ಕೊಡದೇ ಇದ್ದರೆ ನಿನ್ನ ಹೆಂಡತಿಯನ್ನು ಕಳುಹಿಸು ಎಂದು ನನ್ನ ಮೇಲೆ ಮಾನಸಿಕ ಒತ್ತಡ ನೀಡಿದ್ದ. ಇದೇ ವಿಚಾರವಾಗಿ ರಮೇಶ್ ಡಿಂಗ್ರಿ ಮೇಲೆ ನಾನು ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ.
ಆದರೆ ಪೋಲೀಸರು ಆ ದೂರನ್ನು ಅಂದು ಸ್ವೀಕರಿಸಲು ನಿರಾಕರಿಸಿದ್ದರು. ಈ ನಡುವೆ ರಮೇಶ್ ಡಿಂಗ್ರಿ ನನ್ನ ಖಾಲಿ ವೆಕ್ ನಲ್ಲಿ 85 ರೂಪಾಯಿಗಳನ್ನು ನಮೂದಿಸಿ ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು.ಇದೇ ವಿಚಾರವಾಗಿ ನ್ಯಾಯಾಲಯದಲ್ಲಿ 12 ವರ್ಷಗಳ ಕಾಲ ವಾದ-ವಿವಾದ ನಡೆದು ಇದೀಗ ನನಗೆ ಜಯ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.